ಪಡುಬಿದ್ರಿ: ಕಾಪು ತಾಲೂಕು ಅಂಬೇಡ್ಕರ್ ಯುವ ಸೇನೆಯ ಅಧ್ಯಕ್ಷರ ಹತ್ಯೆಗೆ ಸುಪಾರಿ ನೀಡಿರುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಅಂಬೇಡ್ಕರ್ ಯುವ ಸೇನೆಯ ಅಧ್ಯಕ್ಷ ಲೋಕೇಶ್ ಅಂಚನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪಡುಬಿದ್ರಿ ಕಂಚಿನಡ್ಕ ನಿವಾಸಿ ಮನ್ಸೂರ್ ಎಂಬಾತ ನನ್ನ ಕೊಲೆಗೆ ಸುಪಾರಿ ನೀಡಿದ್ದು, ಡಿ. 31ರಂದು ರಿಕ್ಷಾ ಚಾಲಕರೊಬ್ಬರ ಮೂಲಕ ಈ ವಿಷಯ ನನಗೆ ತಿಳಿಯಿತು. ಅಲ್ಲದೆ, ಕೊಲೆಗೆ ಸಂಚು ರೂಪಿಸಿರುವ ಕುರಿತು ಪಡುಬಿದ್ರಿ ಪಂಚಾಯತ್ ಸದಸ್ಯರಾದ ಹಸನ್ ಬಾವಾ, ಫಿರೋಜ್, ನಜೀರ್ ಎಂಬುವರಿಗೂ ತಿಳಿದಿತ್ತು ಎಂದು ಆತ ನನಗೆ ತಿಳಿಸಿದ್ದಾನೆ.
ಬಳಿಕ ದೂರುದಾರರು ಪೋನ್ ಮೂಲಕ ಫಿರೋಜ್ ಎಂಬುವವರನ್ನು ಸಂಪರ್ಕಿಸಿ ವಿಚಾರಿಸಿದಲ್ಲಿ, ಫಿರೋಜ್ ನು ಜ. 6 ರಂದು ಬೆಳಿಗ್ಗೆ 9 ಗಂಟೆಗೆ ಸುರತ್ಕಲ್ ಕೃಷ್ಣಾಪುರದ ನಿವಾಸಿ ಅಜೀದ್ ಎಂಬಾತನ ಬಳಿಗೆ ದೂರುದಾರರನ್ನು ಕರೆದುಕೊಂಡು ಹೋಗಿ ಈತನಿಗೇ ಮನ್ಸೂರನು ನಿನ್ನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದು ಎಂದು ಹೇಳಿದ್ದಾನೆ. ನಂತರ ಅಜೀದ್ ಎಂಬಾತನಲ್ಲಿ ಈ ಬಗ್ಗೆ ವಿಚಾರಿಸಿದಾಗ ಮನ್ಸೂರನು ದೂರುದಾರರನ್ನು ಕೊಲ್ಲಲು ತನಗೆ ತಿಳಿಸಿದ್ದು, ಕಂಚಿನಡ್ಕದಲ್ಲಿ ಕೊಲೆ ಮಾಡಿ ಪರಾರಿಯಾಗುವಂತೆ ತಿಳಿಸಿದ್ದಾನೆ ಎಂದು ಹೇಳಿರುತ್ತಾನೆ.
ದೂರುದಾರರಿಗೂ ಮತ್ತು ಆರೋಪಿತನಿಗೂ ಯಾವುದೇ ವೈಯಕ್ತಿಕ ದ್ವೇಷ ಇರದಿದ್ದರೂ ಕೊಲೆಗೆ ಸಂಚು ರೂಪಿಸಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.