ಉಡುಪಿ: ಮಣಿಪಾಲದ ರಾಜೀವನಗರ-ಪ್ರಗತಿನಗರಕ್ಕೆ ಹೋಗುವ ರಸ್ತೆಯ ಬದಿಯ ಹುಲ್ಲುಗಾವಲಿಗೆ ಸೋಮವಾರ ರಾತ್ರಿ ಬೆಂಕಿ ಬಿದ್ದಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
80 ಬಡಗಬೆಟ್ಟು ಗ್ರಾಮದ ರಾಜೀವನಗರದ ಮೀಸಲು ಅರಣ್ಯದ ಹುಲ್ಲುಗಾವಲಿಗೆ ಯಾರೋ ಕಿಡಿಗೇಡಿಗಳು ಬೆಂಕಿಹಾಕಿದ್ದು, ಬೆಂಕಿಯೂ ಕ್ಷಣಾರ್ಧದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೆ ವ್ಯಾಪಿಸಿದೆ. ನೋಡು ನೋಡುತ್ತಿದ್ದಂತೆ ಸುತ್ತಲಿನ ಹುಲ್ಲುಗಾವಲು ಬೆಂಕಿಗೆ ಆಹುತಿಯಾಗಿದೆ. ಆಕೇಶಿಯ ಕಾಡಿಗೂ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು, ಬೆಂಕಿಯ ರುದ್ರನರ್ತಕ್ಕೆ ಕೆಲವೊಂದು ಆಕೇಶಿಯ ಮರಗಳು ಆಹುತಿಯಾಗಿವೆ.
ಗಾಳಿಯ ರಭಸಕ್ಕೆ ವೇಗ ಪಡೆದುಕೊಂಡ ಬೆಂಕಿ, ಸಮೀಪವೇ ಇದ್ದ ಮನೆಯ ಬೇಲಿಯವರೆಗೂ ಹತ್ತಿಕೊಂಡಿದೆ. ಮನೆಯವರು ತಕ್ಷಣವೇ ಎಚ್ಚೆತ್ತುಕೊಂಡು ನೀರು ಹಾಕಿ ಬೆಂಕಿ ನಂದಿಸಿದರು. ಇದರಿಂದ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.