ಉಡುಪಿ: ಸೋಂಕು ಪತ್ತೆಯಾದರೆ ಮನೆ ಸೀಲ್ ಡೌನ್; ತಾಲೂಕುವಾರು ಕೋವಿಡ್ ಕೇರ್ ಸೆಂಟರ್ ನಿರ್ಮಾಣ; ಸಚಿವ ಸುನಿಲ್ ಕುಮಾರ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸುವ ಉದ್ದೇಶದಿಂದ ತಾಲೂಕುವಾರು ಕೋವಿಡ್ ಕೇರ್ ಸೆಂಟರ್ ಸಿದ್ಧಪಡಿಸಿಕೊಂಡು, ಅಲ್ಲಿಗೆ ಸೋಂಕಿತರನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ. ಅಲ್ಲದೆ, ಸೋಂಕಿತರ ಮನೆ ಸೀಲ್‌ಡೌನ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.   ಸೋಮವಾರ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 10 ದಿನಗಳಲ್ಲಿ ಜಿಲ್ಲೆಯಲ್ಲಿ 979 ಕೇಸ್‌ಗಳು ಪತ್ತೆಯಾಗಿವೆ. ಈ ಪೈಕಿ 61 ಮಂದಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನ್ಯ ಕಾಯಿಲೆ ಜತೆಗೆ ಕೋವಿಡ್‌ನಿಂದ ಬಳಲುತ್ತಿರುವ ಮೂವರನ್ನು ಐಸಿಯುನಲ್ಲಿ ಇಡಲಾಗಿದೆ. ಇವರಲ್ಲಿ ಇಬ್ಬರು ಉಡುಪಿ ಜಿಲ್ಲೆಯವರಾಗಿದ್ದು, ಒಬ್ಬರು ಹೊರ ಜಿಲ್ಲೆಯವರಾಗಿದ್ದಾರೆ ಎಂದರು.   ಸೋಂಕಿತರ ಮನೆಗಳನ್ನು ಸೀಲ್‌ಡೌನ್ ಮಾಡಿ ಅನಗತ್ಯವುಳ್ಳ ಮನೆಗಳಿಗೆ ಸ್ಥಳೀಯ ಗ್ರಾ.ಪಂ. ಮೂಲಕ ಸಾಮಾಗ್ರಿಗಳನ್ನು ಪೂರೈಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.