ಪಡಿತರ ಮೂಲಕ ಕುಚ್ಚಿಗೆ ಅಕ್ಕಿ ವಿತರಣೆಗೆ ಕೇಂದ್ರ ಅನುಮತಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಉಡುಪಿ‌ ಹಾಗೂ ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಪಡಿತರ ಮೂಲಕ ಕುಚ್ಚಿಗೆ ಅಕ್ಕಿ ವಿತರಣೆ ಮಾಡಲು ಕೇಂದ್ರ ಅನುಮತಿ ನೀಡಿದೆ ಎಂದು ಸಮಾಜ ಕಲ್ಯಾಣ ಹಿಂದುಳಿದ ವರ್ಗದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡು ಜಿಲ್ಲೆಗಳಿಗೆ ಒಂದು ಲಕ್ಷ ಕ್ವಿಂಟಾಲ್ ಅಕ್ಕಿ ಬಿಡುಗಡೆಯಾಗುತ್ತದೆ. ಎಂ4, ಜಯಾ ತಳಿಯ ಅಕ್ಕಿಯನ್ನು ಖರೀದಿ ಮಾಡಿ ಪಡಿತರದಾರರಿಗೆ ವಿತರಣೆ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ವಿವಿಧಕಡೆಯಿಂದ ಭತ್ತ ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ಕೆ ಸಂಸದರು ಮತ್ತು 2 ಜಿಲ್ಲೆಯ ಶಾಸಕರು ಅಭಿನಂದನಾರ್ಹರು. ನಾನು ಉಸ್ತುವಾರಿ ಸಚಿವನಾಗಿದ್ದಾಗ ಈ ಪ್ರಯತ್ನ ಮಾಡಿದ್ದೇನೆ ಎಂದರು.
ಶಿಫಾರಸ್ಸು ಮಾಡಿದ ಮುಖ್ಯಮಂತ್ರಿ, ಆಹಾರ ಸಚಿವ ಉಮೇಶ್ ಕತ್ತಿ, ಆಹಾರ ನಿಗಮದ ಉಪಾಧ್ಯಕ್ಷ ಕೊಡ್ಗಿಗೆ ಧನ್ಯವಾದಗಳನ್ನು ತಿಳಿಸಿದರು.