ಮಣಿಪಾಲ: ಕರ್ಫ್ಯೂ ಅವಧಿಯಲ್ಲೂ ರಾತ್ರಿ 12 ರವರೆಗೆ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಯಕ್ಷಗಾನ ಕಲಾವಿದರ ಪ್ರತಿಭಟನೆ

ಉಡುಪಿ: ಕರ್ಫ್ಯೂ ಅವಧಿಯಲ್ಲಿಯೂ ರಾತ್ರಿ 12 ರವರೆಗೆ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ವೃತ್ತಿಪರ, ಹವ್ಯಾಸಿ ಯಕ್ಷಗಾನ ಕಲಾವಿದರು ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಯಕ್ಷಗಾನ ಮೇಳಗಳಲ್ಲಿ ವೃತ್ತಿಪರ ಕಲಾವಿದರಾಗಿ ಹಾಗೂ ನೇಪಥ್ಯ ಕೆಲಸಗಾರರಾಗಿ ದುಡಿಯುತ್ತಿದ್ದೇವೆ. ಸದ್ಯ ರಾಜ್ಯದಲ್ಲಿ ವಿಧಿಸಿರುವ ಕರ್ಪ್ಯೂವಿನಿಂದ ನಮ್ಮ ಜೀವನವೇ ಅತಂತ್ರ ಸ್ಥಿತಿಯಲ್ಲಿದೆ ಎಂದು ಕಲಾವಿದರು ದೂರಿದರು.
ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದ ಯಕ್ಷಗಾನ ಮೇಳಗಳು ಡಿಸೆಂಬರ್ ತಿಂಗಳಲ್ಲಿ ತಿರುಗಾಟ ಪ್ರಾರಂಭಿಸಿ, ಒಂದು ತಿಂಗಳು ಪೂರ್ಣ ಗೊಳ್ಳುವ ಮುಂಚಿತವೇ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಯಕ್ಷಗಾನದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುವ ನಮಗೆ ಯಕ್ಷಗಾನ ಪ್ರದರ್ಶನದಿಂದ ದುಡಿಮೆಯಾಗಬೇಕಿದೆ. ನಮ್ಮನ್ನು ನಂಬಿಕೊಂಡಿರುವ ಕುಟುಂಬ, ಮಕ್ಕಳ ವಿದ್ಯಾಭ್ಯಾಸ, ಮಾಡಿಕೊಂಡಿರುವ ಸಾಲದ ಹೊರೆ ತೀರಿಸುವುದಕ್ಕೆ ಅನ್ಯಮಾರ್ಗವಿಲ್ಲ. ಕಲಾವಿದರಾಗಿ ದುಡಿಯುವ ನಾವುಗಳು ಆರ್ಥಿಕವಾಗಿ ಸಬಲರಾಗಿಲ್ಲ ಎಂದು ಅವರು ಆಳಲು ತೋಡಿಕೊಂಡರು.

ಸರಕಾರ ವಿಧಿಸಿದ ರಾತ್ರಿ ಕರ್ಪ್ಯೂವಿನಿಂದ ಯಕ್ಷಗಾನ, ರಂಗಭೂಮಿ ಕಲಾವಿದರಿಗೆ ಬಹಳಷ್ಟು ತೊಂದರೆಯಾಗಿದೆ. ಕರ್ಪ್ಯೂ, ಲಾಕ್ ಡೌನ್ ಘೋಷಣೆ ಮಾಡಿದಾಗ ವೃತಿತಿಪರ ಯಕ್ಷಗಾನ ಕಲಾವಿದರ ಹಿತವನ್ನು ಕಡೆಗಣಿಸಬಾರದು. ರಾಜ್ಯದಲ್ಲಿ ಕರ್ಪ್ಯೂ ವಿಧಿಸುವುದಾದರೆ ರಾತ್ರಿ 12 ಗಂಟೆಯವರೆಗೆ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಪೂರ್ವ ನಿಗಧಿತ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಬೇಕು. ಕರ್ಪ್ಯೂವಿನಂತಹ ಕಠಿಣ ನಿರ್ಧಾರ ಕೈಗೊಳ್ಳುವಾಗ ಕಲಾವಿದರ ಜೀವನಕ್ಕೆ ಭದ್ರತೆ ಕಲ್ಪಿಸಬೇಕು ಎಂದು ಕಲಾವಿದರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಮೂಲಕ‌ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಲಾವಿದರುಗಳಾದ ಮಂಜುನಾಥ್, ದೇವೇಂದ್ರ ಜಿ., ಶರತ್ ಶೆಟ್ಟಿ, ಸಂದೇಶ್ ಶೆಟ್ಟಿ ಮೊದಲಾದವರು ಇದ್ದರು