ಮಂಗಳೂರು: ಮಂಗಳೂರಿನಲ್ಲಿರುವ ಬಡಗು ತಿಟ್ಟು ಯಕ್ಷಗಾನ ಆಸಕ್ತರು ಹುಟ್ಟುಹಾಕಿದ ‘ಯಕ್ಷಾಭಿನಯ ಬಳಗ’ದ ಎರಡನೆಯ ವಾರ್ಷಿಕೋತ್ಸವ ಮತ್ತು ಯಕ್ಷಗಾನ ಪ್ರದರ್ಶನ ಇದೇ ಜನವರಿ 9ರ ಭಾನುವಾರ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ.
ಅಂದು ಮಧ್ಯಾಹ್ನ 2.30 ಕ್ಕೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಮೊದಲಿಗೆ ಗುರು ಐರೋಡಿ ಮಂಜುನಾಥ ಕುಲಾಲ್ ನಿರ್ದೇಶನದಲ್ಲಿ ಸಂಸ್ಥೆಯ ಶಿಕ್ಷಣಾರ್ಥಿ ಸದಸ್ಯರಿಂದ ವೀರ ಅಭಿಮನ್ಯು ಮತ್ತು ಜಾಂಬವತಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಯಕ್ಷಗಾನ ಕಾರ್ಯಕ್ರಮದ ನಡುವಿನಲ್ಲಿ ಯಕ್ಷಗುರು ಐರೋಡಿ ಮಂಜುನಾಥ ಕುಲಾಲ್ ಅವರಿಗೆ ಗುರುವಂದನೆ ನಡೆಯಲಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಕಟ್ಟೆ ಯ ಅಧ್ಯಕ್ಷ ಹಾಗೂ ಮ.ನ.ಪಾ ದ ವೈದ್ಯಾಧಿಕಾರಿ ಡಾ.ಅಣ್ಣಯ್ಯ ಕುಲಾಲ್, ICAI ಯ ನಿಕಟಪೂರ್ವ ಅಧ್ಯಕ್ಷ CA ಎಸ್ ಎಸ್ ನಾಯಕ್ ಭಾಗವಹಿಸುವರು ಎಂದು ಯಕ್ಷಾಭಿನಯದ ಅಧ್ಯಕ್ಷ ಪ್ರಶಾಂತ್ ಕುಮಾರ ಶೆಟ್ಟಿ, ಸಂತೋಷ ಶೆಟ್ಟಿ, ರಾಘವೇಂದ್ರ ನೆಲ್ಲಿಕಟ್ಟೆ ಹಾಗೂ ಇತರ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.