ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ ಉಡುಪಿ ಶ್ರೀಕೃಷ್ಣ ಮಠವನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸಲು ಮುಂದಾಗಿತ್ತು ಎನ್ನುವ ಮೂಲಕ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಇರಿಸುಮುರಿಸು ಉಂಟು ಮಾಡಿದ್ದಾರೆ.
ಕೃಷ್ಣಮಠದ ರಾಜಾಂಗಣದಲ್ಲಿ ಅದಮಾರು ಪರ್ಯಾಯ ಸಮಾಪನ ಪ್ರಯುಕ್ತ ನಡೆಯುತ್ತಿರುವ ‘ವಿಶ್ವಾರ್ಪಣಂ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಠವನ್ನು ಸರ್ಕಾರದ ವಶಕ್ಕೆ ಪಡೆಯುವ ವಿಷಯ ಗೊತ್ತಾದಾಗ ಸ್ವತಃ ನಾನೇ ಸಿದ್ಧರಾಮಯ್ಯ ಬಳಿಗೆ ಹೋಗಿ, ಮಠವನ್ನು ವಶಪಡಿಸಿಕೊಂಡರೆ ಮೊದಲಿಗೆ ನಾನೇ ರಾಜೀನಾಮೆ ನೀಡುತ್ತೇನೆಂದು ಹೇಳಿದ್ದೆ. ಈ ವಿಷಯ ಇಷ್ಟು ದಿನ ನನ್ನ ಒಳಗೇ ಇತ್ತು. ಇದನ್ನು ಹೇಳುವುದಿಲ್ಲ ಎಂದುಕೊಂಡಿದ್ದೆ. ಆದರೆ ಇವತ್ತು ಹೇಳಬೇಕಾಯಿತು’ ಎಂದರು.
ಕೃಷ್ಣ ಮಠಕ್ಕೆ ಎಂಟುನೂರು ವರ್ಷಗಳ ಇತಿಹಾಸ ಇದೆ. ದೇಶ ವಿದೇಶಗಳಲ್ಲಿ ಭಕ್ತರನ್ನು ಹೊಂದಿರುವ ಮಠ, ಉಡುಪಿ ಜನರಿಗೊಂದು ಭಾಗ್ಯ. ಆದರೆ ನಮ್ಮದೇ ಸರಕಾರ ಇದನ್ನು ವಶಪಡಿಸಲು ಮುಂದಾಗಿತ್ತು. ಆಗ ನಾನು ಮಠವನ್ನು ಮುಟ್ಟಿದರೆ ರಾಜೀನಾಮೆ ನೀಡುತ್ತೇನೆ ಹೇಳಿದ್ದೆ. ಹೀಗಾಗಿ ಮಠವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವವನ್ನು ಸರ್ಕಾರ ಕೈಬಿಟ್ಟಿತು ಎಂದು ಹೇಳಿದ್ದಾರೆ.