ಉಡುಪಿ ನಗರಸಭೆ ಮಾದರಿಯಲ್ಲಿ ಕಾಪು ಪುರಸಭೆ ಅಭಿವೃದ್ಧಿಗೆ ಬಿಜೆಪಿ ಸಂಕಲ್ಪ: ಯಶ್ ಪಾಲ್ ಸುವರ್ಣ

ಕಾಪು: ರಾಜ್ಯದಲ್ಲಿಯೇ ಅತ್ಯುತ್ತಮ ನಗರಸಭೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉಡುಪಿ ನಗರಸಭೆಯನ್ನು ಮಾದರಿಯಾಗಿ ಕಾಪು ಪುರಸಭೆಯ ಸರ್ವಾಂಗೀಣ ಅಭಿವೃದ್ದಿಗೆ ಕಾರ್ಯಯೋಜನೆ ರೂಪಿಸುವ ಸಂಕಲ್ಪದೊಂದಿಗೆ ಬಿಜೆಪಿ ಚುನಾವಣೆಯಲ್ಲಿ ಈ ಬಾರಿ ಪ್ರಚಂಡ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

ಉಡುಪಿ ನಗರಸಭೆ ಉಡುಪಿಯ ನವ ನಿರ್ಮಾಣದ ರೂವಾರಿಗಳಾದ ಕೀರ್ತಿಶೇಷ ಡಾ ವಿ ಎಸ್ ಆಚಾರ್ಯ ರವರ ಮಾರ್ಗದರ್ಶನದಲ್ಲಿ  ಶಾಸಕರಾದ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ಕುಡಿಯುವ ನೀರು, ದಾರಿ ದೀಪ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಘಟಕ, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಮಲ್ಪೆ ಬೀಚ್ ನಿರ್ವಹಣೆ, ಕ್ರೀಡಾಂಗಣ, ಮೀನುಗಾರಿಕೆ ಬಂದರು ಸಹಿತ ಸರ್ವಾಂಗೀಣ ಅಭಿವೃದ್ಧಿಯ ರೂಪುರೇಷೆಯೊಂದಿಗೆ ಜನಪರ ಆಡಳಿತ ನಡೆಸುತ್ತಿರುವಂತೆ ಇದೇ ಮಾದರಿಯಲ್ಲಿ ಕಾಪು ಪುರಸಭೆಯಲ್ಲೂ ಸ್ವಚ್ಛ, ಪಾರದರ್ಶಕ ಆಡಳಿತದ ಮೂಲಕ ಬಿಜೆಪಿ ನವ ಕಾಪು ನಿರ್ಮಾಣದ ಕನಸು ನನಸಾಗಿಸಲಿದೆ.

ಪುರಸಭೆ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ದರ್ಜೆ, ಅಗ್ನಿಶಾಮಕ ದಳ ಘಟಕ ಸ್ಥಾಪನೆ,  ವೈಜ್ಞಾನಿಕ ಒಳಚರಂಡಿ ವ್ಯವಸ್ಥೆ,  ನಾಡದೋಣಿ ಮೀನುಗಾರಿಕೆ ಜೆಟ್ಟಿ ಸ್ಥಾಪನೆ,  ಮೀನು ಮಾರ್ಕೆಟ್ ಸಹಿತ ಆಧುನಿಕ ಮಾರುಕಟ್ಟೆ ಪ್ರಾಂಗಾಣ, ಕಾಪು ಬೀಚ್ ಅಭಿವೃದ್ಧಿ ಸಹಿತ ಶೈಕ್ಷಣಿಕ, ಅರೋಗ್ಯ, ತ್ಯಾಜ್ಯ ವಿಲೇವಾರಿ ಮುಂತಾದ ಕಾಪು ನಾಗರೀಕರ ಬಹುದಿನಗಳ ಬೇಡಿಕೆಗೆ ದೂರದೃಷ್ಟಿ ಯೋಜನೆಗಳ ಮೂಲಕ ಜನಪರ ಆಡಳಿತದೊಂದಿಗೆ ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳ ಸಹಕಾರ ದೊಂದಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಜನಪರ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಬಿಜೆಪಿ ಆದ್ಯತೆ ನೀಡಲಿದೆ.

ಈ ಬಾರಿ ಕಾಪು ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡುಗಳಲ್ಲಿ ಮತದಾರರ ಭಾವನೆ ಬಿಜೆಪಿ ಪರವಾಗಿದ್ದು, ಈ ಬಾರಿ ಕಾಪು ಪುರಸಭೆಯಲ್ಲಿ ಅಧಿಕಾರದ ಚುಕ್ಕಾಣಿಹಿಡಿಯುವ  ವಿಶ್ವಾಸ ಹೊಂದಿರುವುದಾಗಿ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.