ವಾರಾಣಸಿ: ಬಹುನಿರೀಕ್ಷಿತ ಕಾಶಿ ವಿಶ್ವನಾಥ ಕಾರಿಡಾರ್‌ ಉದ್ಘಾಟಿಸಿದ ಪ್ರಧಾನಿ ಮೋದಿ

ವಾರಾಣಸಿ: ಇಲ್ಲಿನ ಕೇಂದ್ರ ಭಾಗದಲ್ಲಿ ₹339 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ಕಾಶಿ ವಿಶ್ವನಾಥ ಕಾರಿಡಾರ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.

ಈ ಯೋಜನೆಯಿಂದಾಗಿ ಪಾರಂಪರಿಕ ನಗರದಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ ಎಂದು ಆಶಿಸಲಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್‌ ಮೊದಲ ಹಂತದ ಯೋಜನೆ ಇದಾಗಿದೆ.

ಮಧ್ವಾಚಾರ್ಯ, ಶಂಕರಾಚಾರ್ಯರನ್ನು ಸ್ಮರಿಸಿದ ಮೋದಿ:
ಸುದೀರ್ಘ ಭಾಷಣದಲ್ಲಿ ಶತಶತಮಾನಗಳಿಂದ ದೇಶದ ನೂರಾರು ಸಾಧು ಸಂತರು ಋಷಿ ಮುನಿಗಳು ವೇದ ಪುರಾಣಗಳು ಕಾಶಿ ವಾರಣಾಸಿಯ ವೈಭವವನ್ನು ಕಟ್ಟಿಕೊಟ್ಟಿರುವುದನ್ನು ಭಾವಪೂರ್ಣವಾಗಿ ಸ್ಮರಿಸಿಕೊಂಡ ಪ್ರಧಾನಿ ಮೋದಿ, ಅವರೆಲ್ಲರಿಗೆ ಭಕ್ತಿ ನಮನ ಸಲ್ಲಿಸಿದರು.

ಜಗದ್ಗುರು ಮಧ್ವಾಚಾರ್ಯರು ವಾರಣಾಸಿಯಲ್ಲಿ ತಮ್ಮ ಶಿಷ್ಯರೊಂದಿಗೆ ವಾರಣಾಸಿಯಲ್ಲಿ ಅಲ್ಲಿನ ಗರಿಮೆಯ ಕುರಿತು ನಡೆಸಿದ ಸಂವಾದದ ಬಗ್ಗೆ ಸುಮಧ್ವವಿಜಯದಲ್ಲಿ ಉಲ್ಲೇಖವಾಗಿರುವ ‘ತೇನೋಪಯಾತೇನ ಕದಾಚನಾಥ ವಾರಣಾಸೀಂ ಪಾಪ ನಿವಾರಣೇನ’ ಶ್ಲೋಕವನ್ನು ಉಲ್ಲೇಖಿಸಿದರು. ಆಚಾರ್ಯ ಶಂಕರರು ಕಾಶೀ ರಾಜನಿಗೆ ನೀಡಿದ ಪ್ರೇರಣೆ, ತುಲಸೀ ದಾಸರಿಗೆ ರಾಮಚರಿತ ಮಾನಸವನ್ನು ಕಾಶಿಯಲ್ಲಿ ಬರೆಯಲು ಸ್ಫೂರ್ತಿ ನೀಡಿದ್ದನ್ನು ಮೆಲುಕು ಹಾಕಿದರು.