ಆತ್ರಾಡಿ: ಶ್ರೀಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ 17ನೇ ಶಾಖಾ ಮಠ ಲೋಕಾರ್ಪಣೆ

ಉಡುಪಿ: ಇಲ್ಲಿನ ಆತ್ರಾಡಿ ಪರೀಕದಲ್ಲಿ ನೂತನವಾಗಿ ನಿರ್ಮಿಸಿರುವ ಸಾರಸ್ವತ ಸಮಾಜದ ಗುರುಪೀಠ ಗೋವಾ ಕೈವಲ್ಯಪುರದ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಮಠದ 17ನೇ ಶಾಖಾ ಮಠವನ್ನು ಗೋವಾ ಕೈವಲ್ಯಪುರ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಇಂದು (ಡಿ.11) ಲೋಕಾರ್ಪಣೆಗೊಳಿಸಿದರು.

ಬಳಿಕ ಆಶೀರ್ವಚನ ನೀಡಿದ ಕೈವಲ್ಯ ಸ್ವಾಮೀಜಿ, ಧರ್ಮ ಮರೆತರೆ ಸ್ವಯಂ ತನ್ನನ್ನು ತಾನೇ ಮರೆತಂತೆ. ಹೀಗಾಗಿ ಧರ್ಮಾಚರಣೆ, ದೇವತಾ ಉಪಾಸನೆ ಅಗತ್ಯ. ಇದು ಸಮಾಜದ ಉದ್ಧಾರಕ್ಕಿರುವ ಮಾರ್ಗವಾಗಿದೆ. ಶ್ರೀಕೃಷ್ಣನ ಪುಣ್ಯ ನಾಡಿನಲ್ಲಿ ಗೌಡಪಾದಾಚಾರ್ಯ ಮಠದ ಶಾಖಾ ಮಠ ಆರಂಭಿಸಿದ್ದೇವೆ. ಇದರ ಮೂಲಕ ದೇವರ ಮನಪೂರ್ವಕ ಪ್ರಾರ್ಥನೆ, ಕುಲದೇವತಾ ಉಪಾಸನೆ, ಧರ್ಮಪಾಲನೆ, ಚಿತ್ತಶುದ್ಧಿಯಿಂದ ಆರಾಧನೆ ನಡೆಯಲಿ. ಆ ಮೂಲಕ ದೇಶದ ಕಲ್ಯಾಣವಾಗಲಿ ಎಂದರು.

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ಯುವ ಜನಾಂಗ ಸಂಸ್ಕೃತಿ, ಸಂಪ್ರದಾಯದಿಂದ ದೂರವಾಗುತ್ತಿದೆ. ಅವರನ್ನು ಆಧ್ಯಾತ್ಮಿಕ ಚಿಂತನೆ, ಧಾರ್ಮಿಕ ಚಟುವಟಿಕೆಗಳ ಜಾಗೃತಗೊಳಿಸುವ ಕೆಲಸ ಮಾಡಬೇಕು. ನಮ್ಮ ಸರಕಾರ ಹಿಂದೂ ಪರವಾಗಿದ್ದು, ನಿಮ್ಮೆಲ್ಲರ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸುತ್ತೇವೆ ಎಂದರು.

ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಮಾತನಾಡಿದರು.
ಆತ್ರಾಡಿ ನೂತನ ಶಾಖಾ ಮಠದ ಅಧ್ಯಕ್ಷ ಸಂತೋಷ್ ವಾಗ್ಳೆ ಅಧ್ಯಕ್ಷತೆ ವಹಿಸಿದ್ದರು.

ಉಜ್ವಲ ಡೆವಲಪರ್ಸ್‍ನ ಎಂಡಿ ಪುರುಷೋತ್ತಮ್ ಪಿ. ಶೆಟ್ಟಿ, ಆತ್ರಾಡಿ ಗ್ರಾ.ಪಂ. ಅಧ್ಯಕ್ಷೆ ರೂಪಾ ಶೆಟ್ಟಿ, ಎಣ್ಣೆಹೊಳೆ ಶ್ರೀಆದಿಶಕ್ತಿ ಮಹಾಲಕ್ಷ್ಮೀ ದೇಗುಲದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ನರಸಿಂಗೆ ಶ್ರೀನರಸಿಂಹ ದೇಗುಲದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಂಕರ್, ಮೊಗೇರು ಶ್ರೀದುರ್ಗಾಪರಮೇಶ್ವರಿ ದೇಗುಲದ ಆಡಳಿತ ಮೊಕ್ತೇಸರ ಅಲ್ಚಾರು ರಾಮಚಂದ್ರ ನಾಯಕ್, ಬೆಂಗಳೂರು ಟೆಕ್ಸಾಸ್‍ನ ಮುಖ್ಯ ಕಾರ್ಯನಿರ್ವಾಹಣಾಕಾರಿ ರಮಾನಂದ ನಾಯಕ್, ಬಿಜೆಪಿ ಉಡುಪಿ ನಗರ ಅಧ್ಯಕ್ಷ ಮಹೇಶ್ ಠಾಕೂರ್, ಮೋಂತಿಮಾರು ಶ್ರೀದುರ್ಗಾಪರಮೇಶ್ವರಿ ದೇಗುಲದ ಆಡಳಿತ ಟ್ರಸ್ಟಿ ಶೇಣಿ ಮುಕುಂದ ನಾಯಕ್, ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇಗುಲದ ಶಶಿಧರ ವಾಗ್ಳೆ, ಪಳ್ಳಿ ಅಡಪಾಡಿ ಶ್ರೀಉಮಾಮಹೇಶ್ವರ ದುರ್ಗಾಪರಮೇಶ್ವರಿ ದೇಗುಲದ ಧರ್ಮದರ್ಶಿ ಪುಂಡಲೀಕ ನಾಯಕ್, ಆತ್ರಾಡಿ ಬೈರಂಜೆ ಶ್ರೀಭವಾನಿ ಶಂಕರ ದೇಗುಲದ ಆಡಳಿತ ಮೊಕ್ತೇಸರ ದೇವೇಂದ್ರ ವಾಗ್ಳೆ, ಕವಳೆ ಮಠದ ಟ್ರಸ್ಟಿ ನಿಲೇಶ್ ಬೋರ್ಕಾರ್ ಉಪಸ್ಥಿತರಿದ್ದರು.

ಮಣಿಪಾಲ ಆರ್‍ಎಸ್‍ಬಿ ಸಂಘದ ಅಧ್ಯಕ್ಷ ಗೋಕುಲದಾಸ್ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಶ್ರೀಶ ನಾಯಕ್ ಪೆರ್ಣಂಕಿಲ ವಂದಿಸಿದರು. ಪರ್ಕಳ ಶ್ರೀದುರ್ಗಾಪರಮೇಶ್ವರಿ ಸೊಸೈಟಿ ಸಿಇಓ ನಿತ್ಯಾನಂದ ನಾಯಕ್ ನರಸಿಂಗೆ ಕಾರ್ಯಕ್ರಮ ನಿರೂಪಿಸಿದರು.