ಉಡುಪಿ: ಜಿಲ್ಲೆಯಲ್ಲಿ ಕೋವಿಡ್ 19 ಮೂರನೇ ಅಲೆಯನ್ನು ಸಮರ್ಥವಾಗಿ ತಡೆಯಲು ಡಿಸೆಂಬರ್ ಅಂತ್ಯದೊಳಗೆ 18 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಶೇ. 90ರಷ್ಟು ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ನೀಡುವ ನಿಟ್ಟಿನಲ್ಲಿ ತಕ್ಷಣದಿಂದ ಕಾರ್ಯ ಪ್ರವೃತ್ತರಾಗುವಂತೆ ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಕೋವಿಡ್ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮತ್ತು ಲಸಿಕಾಕರಣದ ಪ್ರಗತಿಯ ಕುರಿತು ಪರಿಶೀಲನಾ ಸಭೆ ನಡೆಸಿದರು.
ಈಗಾಗಲೇ ಜಿಲ್ಲೆಯಲ್ಲಿ 95% ಪ್ರಥಮ ಡೋಸ್ ಲಸಿಕೆ ನೀಡಲಾಗಿದ್ದು, 2 ನೇ ಡೋಸ್ ಪಡೆಯಲು ಅರ್ಹರಿರುವವರನ್ನು ಮತ್ತು ಅವಧಿ ಮೀರಿದ್ದರೂ ಲಸಿಕೆ ಪಡೆಯದವವರನ್ನು ಗುರುತಿಸಿ, ಕೂಡಲೇ ಅವರಿಗೆ ಲಸಿಕೆ ನೀಡಿ, ಲಸಿಕೆ ಪಡೆಯಲು ನಿರಾಕರಣೆ ಇರುವ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಲಸಿಕೆ ಪಡೆಯುವಂತೆ ಮನವೊಲಿಸಬೇಕು ,ಡಿಸೆಂಬರ್ ಅಂತ್ಯದ ವೇಳೆಗೆ 90% 2 ನೇ ಡೋಸ್ ನೀಡುವ ಗುರಿಯೊಂದಿಗೆ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು. ಎಲ್ಲಾ ಖಾಸಗಿ ಮತ್ತು ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆಯನ್ನು ನಡೆಸುವಂತೆ ಸೂಚಿಸಿದ ಸಚಿವರು , ಪಾಸಿಟಿವ್ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಆ ಪ್ರದೇಶದಲ್ಲಿ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವಂತೆ ತಿಳಿಸಿದರು.
ಕೋವಿಡ್ 2 ನೇ ಅಲೆಯ ಸಂದರ್ಭದಲ್ಲಿ ಸರಕಾರ ಮತ್ತು ವಿವಿಧ ದಾನಿಗಳು ಹಲವು ವೈದ್ಯಕೀಯ ಉಪಕರಣಗಳು ಜಿಲ್ಲಾಡಳಿತಕ್ಕೆ ಕೊಡುಗೆ ನೀಡಿದ್ದು, ಈ ಎಲ್ಲಾ ಉಪಕರಣಗಳನ್ನು ಆಸ್ಪತ್ರೆಗಳಲ್ಲಿ ಅಳವಡಿಸಿರುವ ಕುರಿತು ಮತ್ತು ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿರುವ ಕುರಿತಂತೆ ಪರಿಶೀಲಿಸುವಂತೆ ಸೂಚಿಸಿದ ಸಚಿವರು, ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಕೆ.ಎಂ.ಸಿ ವತಿಯಿಂದ ತಾಂತ್ರಿಕ ಮತ್ತು ಕೋವಿಡ್ ನಿರ್ವಹಣೆಗೆ ಅಗತ್ಯ ತರಬೇತಿ ಕಾರ್ಯಗಾರಗಳನ್ನು ನಡೆಸುವಂತೆ ಸೂಚಿಸಿದರು.
ಜಿಲ್ಲೆಯ ವಿವಿಧ ಖಾಸಗಿ ಆಸ್ಪತೆಗಳಲ್ಲಿ ಲಭ್ಯವಿರುವ ಬೆಡ್ ಗಳ ಸಂಖ್ಯೆ, ಹೆಚ್ಚು ಮಾಡಬಹುದಾದ ಬೆಡ್ ಗಳ ಸಂಖ್ಯೆ, ಲಭ್ಯವಿರುವ ಆಕ್ಸಿಜಿನ್ ಮತ್ತು ವೆಂಟಿಲೇಟರ್ ಸೇರಿದಂತೆ ಎಲ್ಲಾ ಅಗತ್ಯ ಮೂಲ ಆರೋಗ್ಯ ಸೌಲಭ್ಯಗಳ ಕುರಿತಂತೆ ಮಾಹಿತಿ ಪಡೆಯಬೇಕು ಮತ್ತು ತುರ್ತು ಸಂದರ್ಭದಲ್ಲಿ ತಕ್ಷಣದಲ್ಲಿ ಅವುಗಳು ಲಭ್ಯವಾಗುವಂತೆ ನೋಡಿಕೊಳ್ಳುವಂತೆ ತಿಳಿಸಿದರು.
ಜಿಲ್ಲೆಗೆ ವಿದೇಶಗಳಿಂದ ಬರುವವರನ್ನು ಸರ್ಕಾರದ ಮಾರ್ಗಸೂಚಿಯನ್ವಯ ಪರೀಕ್ಷೆಗೆ ಒಳಪಡಿಸುವಂತೆ ತಿಳಿಸಿದ ಸಚಿವರು, ಸಾಮಾಜಿಕ ಅಂತರ ಪಾಲನೆ ಕುರಿತಂತೆ ಹೆಚ್ಚಿನ ನಿಗಾ ವಹಿಸಬೇಕು , ಕೋವಿಡ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಪಾಲನೆ ಮತ್ತು ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸುವುದು ಅತ್ಯಂತ ಅವಶ್ಯಕ ಎಂದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಜಿಲ್ಲೆಯಲ್ಲಿ ಮನೆ ಮನೆಗೆ ಲಸಿಕಾ ಮಿತ್ರ ಕಾರ್ಯಕ್ರಮದ ಮೂಲಕ ಪ್ರತೀ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತಿದ್ದು, ಲಸಿಕೆ ಕುರಿತು ಆಕ್ಷೇಪಣೆ ಇರುವಲ್ಲಿ ಅಧಿಕಾರಿಗಳು ಖುದ್ದು ತೆರಳಿ ಮನವೊಲಿಸಿ ಲಸಿಕೆ ನೀಡಲಾಗುತ್ತಿದೆ. ಎಲ್ಲಾ ಸಮುದಾಯಗಳ ಮುಖಂಡರ ಮೂಲಕ ಕೂಡಾ ಲಸಿಕೆ ಪಡೆಯುವ ಬಗ್ಗೆ ಅರಿವು ಮೂಡಿಸಲಾಗಿದೆ. ವಲಸಿಗರು ಮತ್ತು ಕಾರ್ಮಿಕರಿಗಾಗಿ ವಿಶೇಷ ಲಸಿಕಾ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಪ್ರತಿದಿನ ಸರಾಸರಿ 4000 ಅಧಿಕ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ಪ್ರಸ್ತುತ ಜಿಲ್ಲೆಯ ಪಾಸಿಟಿವಿಟ್ ಪ್ರಮಾಣ 0.16 ಇದ್ದು, ಒಟ್ಟು 72 ಸಕ್ರಿಯ ಪ್ರಕರಣಗಳಲ್ಲಿ, 66 ಮಂದಿ ಹೋಂ ಐಸೋಲೇಶನ್ ಮತ್ತು 6 ಮಂದಿ ಆಸ್ಪತ್ರೆಗಳಲ್ಲಿದ್ದಾರೆ , ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿರುವ ಪಂಚ ಸೂತ್ರಗಳಾದ, ಪರೀಕ್ಷೆ, ಪತ್ತೆ, ಚಿಕಿತ್ಸೆ, ಲಸಿಕೆ ಮತ್ತು ಕೋವಿಡ್ ಸಮುಚಿತ ವರ್ತನೆಗಳ ಪಾಲನೆಯನ್ನು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಪಾಲಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ , ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಡಿಹೆಚ್‌ಓ ಡಾ. ನಾಗಭೂಷಣ ಉಡುಪ, ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ ಭಟ್ ,ಮತ್ತಿತರರು ಉಪಸ್ಥಿತರಿದ್ದರು.