ಮಣಿಪಾಲ: ವಿಹಾರಕ್ಕೆ ಬಂದಿದ್ದ ಜೋಡಿಯ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಹಲ್ಲೆ

ಮಣಿಪಾಲ: ನೆರೆಮನೆಯ ಗೆಳತಿಯೊಂದಿಗೆ ಮಣಿಪಾಲದ ಮಣ್ಣಪಳ್ಳ ಉದ್ಯಾನವನಕ್ಕೆ ಸುತ್ತಾಡಲು ಬಂದಿದ್ದ ಯುವಕನಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಇಂದು ನಡೆದಿದೆ‌.

ಸಾಲಿಗ್ರಾಮದ ಅಲ್ತಾಫ್ (27) ಎಂಬಾತನ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಾಣೇಶ್, ವಿನೂತ್ ಪೂಜಾರಿ ಹಾಗೂ ಸಂಜಯ ಕುಮಾರ್ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲ್ತಾಫ್ ತನ್ನ ನೆರೆಮನೆಯ ಗೆಳತಿಯೊಂದಿಗೆ ಇಂದು ಮಧ್ಯಾಹ್ನ ಮಣಿಪಾಲದ ಮಣ್ಣಪಳ್ಳ ಉದ್ಯಾನವನಕ್ಕೆ ತಿರುಗಾಡಲು ಬಂದಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿಗಳಾದ ಪ್ರಾಣೇಶ್‌, ವಿನೂತ್ ಪೂಜಾರಿ ಮತ್ತು ಸಂಜಯ್‌‌ ಕುಮಾರ್ ಎಂಬವರು ಅಲ್ತಾಫ್ ಹಾಗೂ ಆತನ ಗೆಳತಿಯನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.