ಉಡುಪಿ: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದರ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಉಡುಪಿ ಶಾಸಕ ಕೆ. ರಘುಪತಿ ಭಟ್, ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡಿದರೆ ತಪ್ಪೇನಿಲ್ಲ ಎನ್ನುವ ಮೂಲಕ ಸರ್ಕಾರದ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಯಲ್ಲಿ ಎಲ್ಲರೂ ಮೊಟ್ಟೆ ತಿನ್ನಬೇಕೆಂದಿಲ್ಲ. ಎಳವೆಯಲ್ಲಿ ಯಾರು ಸಸ್ಯಾಹಾರಿಗಳಾಗಿರುತ್ತಾರೋ, ಅವರು ಸಸ್ಯಾಹಾರಿಯಾಗಿಯೇ ಇರುತ್ತಾರೆ. ಅವರು ಬೆಳೆದು ದೊಡ್ಡವರಾದ ಮೇಲೆ ಅವರ ಆಹಾರ ಕ್ರಮ ಬದಲಾಗಬಹುದು. ಹೀಗಾಗಿ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವುದರಲ್ಲಿ ತಪ್ಪಿಲ್ಲ ಎಂದರು.
ಪ್ರತ್ಯೇಕ ವ್ಯವಸ್ಥೆ ಮಾಡಿ:
ಸಸ್ಯಾಹಾರಿಗಳಿಗೆ ಮೊಟ್ಟೆ ತಿನ್ನುವುದು ನೋಡುವಾಗ ಬೇರೆ ರೀತಿಯ ಭಾವನೆ ಬರಬಹುದು. ಹೀಗಾಗಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವಾಗ ಪ್ರತ್ಯೇಕ ಟೇಬಲ್, ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಬಹುದು ಎಂದು ಹೇಳಿದರು.