ಉಡುಪಿ: ಇಲ್ಲಿನ ಆತ್ರಾಡಿ ಪರೀಕ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಸಾರಸ್ವತ ಸಮಾಜದ ಆದ್ಯಪೀಠ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ 17ನೇ ನೂತನ ಶಾಖಾ ಮಠದ ಉದ್ಘಾಟನೆ ಹಾಗೂ ಶ್ರೀ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀ ಮಹಾರಾಜ್ ಅವರ ಮಠ ಪ್ರವೇಶ ಕಾರ್ಯಕ್ರಮ ಇಂದಿನಿಂದ (ಡಿ.10) ಆರಂಭಗೊಳ್ಳಲಿದೆ.
ಇಂದು ಕೈವಲ್ಯ ಶ್ರೀಗಳ ಮಠ ಪ್ರವೇಶ: ಕೈವಲ್ಯ ಸ್ವಾಮೀಜಿ ಅವರು ಇಂದು (ಡಿ. 10) ಸಂಜೆ ಶ್ರೀಮಠವನ್ನು ಪ್ರವೇಶ ಮಾಡುವರು. ಈ ಪ್ರಯುಕ್ತ ಅವರನ್ನು ಅಂದು ಸಂಜೆ 4.30ಗಂಟೆಗೆ ಪರ್ಕಳ ಹೈಸ್ಕೂಲು ಬಳಿಯಿಂದ ಭವ್ಯವಾದ ಶೋಭಾಯಾತ್ರೆಯ ಮೂಲಕ ಶ್ರೀಮಠಕ್ಕೆ ಕರೆತರಲಾಗುತ್ತದೆ. ಶ್ರೀಗಳು ಡಿ.17ರ ವರೆಗೆ ನೂತನ ಶಾಖಾ ಮಠದಲ್ಲಿ ಮೊಕ್ಕಾಂ ಇರಲಿದ್ದು, ಶ್ರೀ ಭವಾನೀ ಶಂಕರ ದೇವರ ಪೂಜೆ, ಶ್ರೀಗಳಿಗೆ ಭಿಕ್ಷಾ ಪ್ರದಾನ, ಪಾದ್ಯಪೂಜೆ ಇತ್ಯಾದಿಗಳು ನಡೆಯಲಿವೆ.
ನಾಳೆ ಶಾಖಾ ಮಠ ಉದ್ಘಾಟನೆ:
ಉಡುಪಿ ಆತ್ರಾಡಿ ಪರೀಕ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ನೂತನ ಭವ್ಯ ಶಾಖಾ ಮಠವನ್ನು ಶ್ರೀ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀ ಮಹಾರಾಜ್ ನಾಳೆ (ಡಿ.11) ಸಂಜೆ 3 ಗಂಟೆಗೆ ಉದ್ಘಾಟಿಸುವ ಮೂಲಕ ಮಠವನ್ನು ಸಾರಸ್ವತ ಸಮಾಜಕ್ಕೆ ಅರ್ಪಣೆ ಮಾಡಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಉಡುಪಿ ಶಾಸಕ ಕೆ. ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಮೊದಲಾದ ಗಣ್ಯರು ಭಾಗವಹಿಸುವರು.