ಕಟಪಾಡಿ: ಮೂವರು ಫಕೀರನ ವೇಷಧಾರಿಗಳು ಮನೆ ಮಂದಿಗೆ ಮಂಕುಬೂದಿ ಎರಚಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿಗೊಂಡು ಪರಾರಿಯಾದ ಘಟನೆ ಕಟಪಾಡಿಯ ಅಗ್ರಹಾರ ಸಮೀಪ ಬುಧವಾರ ನಡೆದಿದೆ.
ಫಕೀರನ ವೇಷ ಧರಿಸಿಕೊಂಡು ಬಂದಿದ್ದ ಮೂವರು ಖದೀಮರು ಕಟಪಾಡಿಯ ಅಗ್ರಹಾರದ ಮನೆಗೆ ಬಂದಿದ್ದು, ತಮ್ಮ ತಂತ್ರವನ್ನು ಬಳಸಿ ಮನೆಯವರಿಗೆ ಮಂಕುಬೂದಿ ಎರಚಿದ್ದಾರೆ. ಖದೀಮರ ತಂತ್ರಕ್ಕೆ ಬಲಿಪಶುಗಳಾದ ಮನೆಯವರು ತಮ್ಮ ಸ್ವಪ್ರಜ್ಞೆಯನ್ನು ಕಳೆದುಕೊಂಡಿದ್ದರು.
ತಮ್ಮಲ್ಲಿರುವ ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ತಮ್ಮ ಕೈಯಾರೇ ಖದೀಮರಿಗೆ ತಂದುಕೊಟ್ಟಿದ್ದಾರೆ ಎನ್ನಲಾಗಿದೆ. ಬಳಿಕ ಅಲ್ಲಿಂದ ಫಕೀರನ ವೇಷಧಾರಿಗಳು ಪರಾರಿಯಾಗಿದ್ದಾರೆ. ಇವರು ರಸ್ತೆಯಲ್ಲಿ ನಡೆದುಕೊಂಡು ಬರುವ ಹಾಗೂ ಹೋಗುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.