ಉಡುಪಿ: ಡಿ.5ಕ್ಕೆ ಕಟ್ಟಡ ಕಾರ್ಮಿಕರ ನೋಂದಣಿ ಶಿಬಿರ

ಉಡುಪಿ: ನಗರದ ಬೀಡಿನಗುಡ್ಡೆ ವ್ಯಾಪ್ತಿಯ ವಲಸೆ ಕಾರ್ಮಿಕರ ಕಾಲೋನಿಯಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಫಲಾನುಭವಿಯನ್ನಾಗಿ ನೋಂದಾಯಿಸುವ ಸಲುವಾಗಿ ಡಿಸೆಂಬರ್ 5ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಬೀಡಿನಗುಡ್ಡೆ ಮಂಡಳಿಯ ಶಿಶುಪಾಲನಾ ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರದಲ್ಲಿ ಕೇಂದ್ರ ಸರ್ಕಾರದ ಇ-ಶ್ರಮ್ ಕಾರ್ಡ್, ಪಿ.ಎಂ.ಎಸ್.ವೈ.ಎ ಕಾರ್ಡ್, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಕಾರ್ಡ್, ವಾಣಿಜ್ಯ ವಾಹನಗಳ ಕ್ಲೀನರ್ ಮತ್ತು ನಿರ್ವಾಹಕರಿಗೂ ಅನ್ವಯವಾಗುವ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಸಹ ಅವಕಾಶ ಕಲ್ಪಿಸಲಾಗುವುದು.

ನೋಂದಣಿ ಆಗದೆ ಇರುವ 18 ರಿಂದ 60 ವರ್ಷದೊಳಗಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ 16 ರಿಂದ 59 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಮೂಲ ಆಧಾರ್ ಕಾರ್ಡ್, ಮೂಲ ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಆಧಾರ್‌ಸಂಖ್ಯೆಯೊಂದಿಗೆ ಜೋಡಣೆ ಆಗಿರುವ ಮೊಬೈಲ್ ನಂಬರ್‌ನೊಂದಿಗೆ ಶಿಬಿರದಲ್ಲಿ ಭಾಗವಹಿಸಿ, ಸದರಿ ನೋಂದಣಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.