ಶಾಸಕ ವಿಶ್ವನಾಥ್
ಬೆಂಗಳೂರು: ಯಲಹಂಕ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಸುದ್ದಿ ಹೊರಬಿದ್ದಿದ್ದು, ಈ ಕುರಿತಾದ ವಿಡಿಯೋವೊಂದು ಹೊರಬಂದಿದೆ. ಈ ಬಗ್ಗೆ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ವಿಶ್ವಾನಾಥ್ ಎದುರು ಸ್ಪರ್ಧಿಸಿ ಸೋತಿದ್ದ ಕಾಂಗ್ರೆಸ್ ಮುಖಂಡ ಎಂ.ಎನ್. ಗೋಪಾಲಕೃಷ್ಣ ಎಂಬಾತನೇ ಹತ್ಯೆಗೆ ಸುಫಾರಿ ನೀಡಿದ್ದನು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಚರ್ಚೆ ಮಾಡಿರುವ ವಿಡಿಯೋ ಸಿಸಿಬಿ ತಂಡಕ್ಕೆ ಸಿಕ್ಕಿದ್ದು, ಇದರ ಆಧಾರದ ಮೇಲೆ ತಡರಾತ್ರಿವರೆಗೂ ಸಿಸಿಬಿಯಿಂದ ಗೋಪಾಲಕೃಷ್ಣ ಅವರನ್ನು ವಿಚಾರಣೆ ಮಾಡಲಾಗಿದೆ.
ಈ ತನಿಖೆ ವೇಳೆ ಹೊಸ ವಿಷಯವೊಂದು ಹೊರ ಬಂದಿದ್ದು, ಅದರಲ್ಲಿ ಗೋಪಾಲಕೃಷ್ಣ ಅವರನ್ನು ಬಿಟ್ಟು ವಿಡಿಯೋ ಮಾಡಿರುವ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದ ಯಲಹಂಕದ ವಿಶ್ವನಾಥ್ ಬೆಂಬಲಿಗ ದೇವರಾಜ್ ಅಲಿಯಾಸ್ ಕುಳ್ಳದೇವರಾಜ್ ಎಂಬಾತನನ್ನು ಸಿಸಿಬಿ ವಶಕ್ಕೆ ಪಡೆದಿದ್ದಾರೆ.
ಇನ್ನೊಂದೆಡೆ ವಿಶ್ವನಾಥ್ ಅವರಿಗೆ ಹತ್ತಿರವಾಗಲೂ ಗೋಪಾಲಕೃಷ್ಣ ಬಳಿ ಹೋಗಿ ವಿಶ್ವನಾಥ್ ಮುಗಿಸುವ ಪ್ಲಾನ್ ಕೊಟ್ಟು ಮಾತುಕತೆ ನಡೆಸಿದ್ರಾ ಅನ್ನೋ ಆರೋಪ ಈಗ ಕುಳ್ಳ ದೇವರಾಜ್ ಮೇಲೆ ಬಂದಿದೆ. ಇದೇ ಕಾರಣಕ್ಕಾಗಿ ಕುಳ್ಳ ದೇವರಾಜ್ ನನ್ನು ವಶಕ್ಕೆ ಪಡೆದುಕೊಂಡ ಸಿಸಿಬಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ. ಗೋಪಾಲಕೃಷ್ಣರನ್ನ ಬಿಟ್ಟು ಕಳುಹಿಸಿದೆ ಎಂದು ತಿಳಿದುಬಂದಿದೆ.