ಕ್ರೀಡಾ ಸಮ್ಮೇಳನದ ಪೂರ್ವಭಾವಿ ತಯಾರಿ ಸಭೆ

ಉಡುಪಿ: ಕ್ರೀಡೆ ಮನಸ್ಸು ಮನಸ್ಸುಗಳ ನಡುವಿನ ಕೀಳರಿಮೆಯನ್ನು ನಾಶ ಮಾಡುತ್ತದೆ, ಭಾವನಾತ್ಮಕ ಸಂಬಂಧಗಳಿಗೆ ಭದ್ರ ಬುನಾದಿಯನ್ನು ಮೂಡಿಸುತ್ತದೆ ಹಾಗೆಯೆ ವ್ಯಕ್ತಿ ವ್ಯಕ್ತಿಗಳ ನಡುವಿನ ಸಾಮಾಜಿಕ ಅಂತರವನ್ನು ಕಡಿಮೆ ಮಾಡುತ್ತದೆ ಹಾಗು ಇಡೀ ದೇಶದ ಸಾರ್ವಭೌಮತೆಯನ್ನು ಕಾಪಾಡುವಲ್ಲಿ ಬೇಕಾಗಿರುವ ಸಂಕಲ್ಪ ಶುದ್ಧಿಯನ್ನು ಕ್ರೀಡೆಯಲ್ಲಿ ಅರಸುವಂತಹ ನೂತನ ಪ್ರಯತ್ನವೇ ಕ್ರೀಡಾ ಸಮ್ಮೇಳನದ ಪರಿಕಲ್ಪನೆ ಎಂದು ಗುರ್ಮೆ ಸುರೇಶ್ ಶೆಟ್ಟಿ ಅಭಿಮತ ವ್ಯಕ್ತ ಪಡಿಸಿದರು.

ಉಡುಪಿ ಅಜ್ಜರಕಾಡು ಮೈದಾನದಲ್ಲಿ ಉಡುಪಿ ಜಿಲ್ಲಾ ಕ್ರೀಡಾ ಭಾರತಿ ಆಶ್ರಯದಲ್ಲಿ ಶಾಸಕ ಕೆ,ರಘುಪತಿ ಭಟ್ ನೇತೃತ್ವದಲ್ಲಿ ಮುಂಬರುವ ಜನವರಿ ತಿಂಗಳಲ್ಲಿ ಹಮ್ಮಿಕೊಳ್ಳಲಾದ ಕ್ರೀಡಾ ಸಮ್ಮೇಳನದ ಪೂರ್ವಭಾವಿ ತಯಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರದಲ್ಲಿಯೇ ಪ್ರಪ್ರಥಮ ಬಾರಿಗೆ ಕ್ರೀಡಾ ಸಂಘಟನೆಗಳ ಸಮಾಗಮ, ಉಡುಪಿ ಜಿಲ್ಲಾ ಕ್ರೀಡಾ ಭಾರತೀಯ ವಿನೂತನ ಪ್ರಯೋಗ: ಮಹೇಶ್ ಠಾಕೂರ್

ಉಡುಪಿ ಜಿಲ್ಲಾ ಕ್ರೀಡಾ ಭಾರತಿ ಆಶ್ರಯದಲ್ಲಿ ನಡೆಯಲಿರುವ ಒಂದು ದಿನದ ಈ ಕ್ರೀಡಾ ಸಮ್ಮೇಳನವು ರಾಷ್ಟ್ರದಲ್ಲಿಯೇ ಪ್ರಪ್ರಥಮ ಪ್ರಯೋಗವಾಗಿದ್ದು ದೇಶದ ಕ್ರೀಡೆಯಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿಯಾಗಲಿದೆ. ಜಿಲ್ಲೆಯ 25 ಕ್ಕೂ ಹೆಚ್ಚು ವಿವಿಧ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾ ಸಂಘಟನೆಗಳು ಭಾಗವಹಿಸಲಿವೆ.

ಈ ಕ್ರೀಡಾ ಸಮ್ಮೇಳನದಲ್ಲಿ ಕ್ರೀಡಾ ಸ್ಪರ್ಧೆಗಳ ಜೊತೆಗೆ ಕ್ರೀಡಾ ವಿಚಾರ ಸಂಕಿರಣಗಳು ನಡೆಯಲಿದ್ದು ರಾಷ್ಟ್ರದ ಪ್ರಮುಖ ಕ್ರೀಡಾ ಪಟುಗಳು ಮತ್ತು ಕ್ರೀಡಾ ಪೋಷಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಸಾಂಸ್ಕ್ರತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ಕ್ರೀಡಾ ವಸ್ತು ಪ್ರದರ್ಶನಗಳು ಕೂಡ ನಡೆಯಲಿವೆ. ದೇಶದಲ್ಲಿ ಕ್ರೀಡೆಗೆ ಹೊಸ ಆಯಾಮ ನೀಡಿ ಯುವಜನತೆಗೆ ಕ್ರೀಡೆಯ ಬಗ್ಗೆ ಆಕರ್ಷಕ ಭಾವನೆಗಳನ್ನು ಮೂಡಿಸುವ ಹಾಗು ಭಾರತೀಯ ಕ್ರೀಡಾ ವಿಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಉದ್ದೇಶದಿಂದ ಈ ಸಮಾವೇಶ ನಡೆಸಲಾಗುತ್ತಿದೆ. ಹಾಗೆ ಈ ಕ್ರೀಡಾ ಸಮ್ಮೇಳನದಲ್ಲಿ ನಡೆಯುವ ವಿಚಾರಸಂಕಿರಣಗಳಲ್ಲಿ ಹೊರ ಹೊಮ್ಮುವ ಗಮನಾರ್ಹ ಅಂಶಗಳನ್ನು ಕ್ರೋಡೀಕರಿಸಿ ಕ್ರೀಡಾ ಅಭಿವೃದ್ಧಿಗೆ ಪೂರಕವಾಗುವಂತೆ ನಿರ್ಣಯಗಳನ್ನು ಮಂಡಿಸಿ ಕೇಂದ್ರ ಸರಕಾರಕ್ಕೆ ವರದಿ ನೀಡಲಾಗುವುದು. ಹಾಗು ಮುಂದೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿಯೂ ಕ್ರೀಡಾ ಸಮ್ಮೇಳನಗಳನ್ನು ನಡೆಸುವ ಬಗ್ಗೆ ಚಿಂತನೆಗಳನ್ನು ನಡೆಸಲಾಗುವುದು ಎಂದು ಕಾರ್ಯಾಧ್ಯಕ್ಷರಾಗಿ ನಿಯುಕ್ತಿ ಗೊಂಡ ಮಹೇಶ್ ಠಾಕೂರ್  ಮಾಹಿತಿ ಹಂಚಿಕೊಂಡರು.

ಕ್ರೀಡಾ ಸಮ್ಮೇಳನದ ಕಾರ್ಯನಿರ್ವಹಣಾ ಸಮಿತಿಯ ರಚನೆ

ಈ ಸಂದರ್ಭದಲ್ಲಿ ಸಮ್ಮೇಳನ ಆಯೋಜನೆಗಾಗಿ ಶಾಸಕ ಕೆ.ರಘುಪತಿ ಭಟ್ ರವರ ಗೌರವಾಧ್ಯಕ್ಷತೆಯಲ್ಲಿ ಕಾರ್ಯನಿರ್ವಹಣಾ ಸಮಿತಿಯ ರಚನೆ ಮಾಡಲಾಯಿತು. ಸಮಿತಿ ಅಧ್ಯಕ್ಷರಾಗಿ ಗುರ್ಮೆ ಸುರೇಶ್ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಮಹೇಶ್ ಠಾಕೂರ್, ಪ್ರದಾನ ಕಾರ್ಯದರ್ಶಿಯಾಗಿ ರೋಷನ್ ಕುಮಾರ್ ಶೆಟ್ಟಿ, ಕಾರ್ಯದರ್ಶಿಗಳಾಗಿ ದಿನೇಶ್ ಕುಮಾರ್ ಮತ್ತು ಅನಿಲ್ ಕುಮಾರ್, ಕೋಶಾಧಿಕಾರಿಯಾಗಿ ಲಿಂಗಯ್ಯ ಅವರನ್ನು ಆಯ್ಕೆ ಮಾಡಲಾಯಿತು.

ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಜಿಲ್ಲೆಯ ವಿವಿಧ ಕ್ರೀಡಾ ಸಂಘಟನೆಗಳ ಪದಾಧಿಕಾರಿಗಳಾದ ಸೀತಾರಾಮ್ ಗೌಡ, ಶ್ರೀಧರ್ ಹೆಚ್, ವಿನಯ್ ಕುಮಾರ್, ಶಿವಕುಮಾರ್, ಕಾಶಿ ರಾಮ್, ನಾರಾಯಣ ದೇವಾಡಿಗ, ದೀಪಕ್ ಬಾಯರಿ, ಡಾ. ರಾಮಚಂದ್ರ ಪಾಟ್ಕರ್, ಶಾಲಿನಿ ಶೆಟ್ಟಿ, ಮಂಜುನಾಥ್ ಶೆಟ್ಟಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಕ್ರೀಡಾ ಭಾರತಿ ಅಧ್ಯಕ್ಷ ಕೋಟ ವಸಂತ್ ಶೆಟ್ಟಿ ಸ್ವಾಗತಿಸಿದರು, ಪ್ರದಾನ ಕಾರ್ಯದರ್ಶಿ ಪ್ರಸನ್ನ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು, ಲಿಂಗಯ್ಯ ನಿರೂಪಿಸಿ ವಂದಿಸಿದರು.