ಉಡುಪಿ: ಹೊನ್ನಾವರಕ್ಕೆ ಭೇಟಿ ನೀಡಿದ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಅಲ್ಲಿನ ಭಕ್ತರು ಮತ್ತು ನಾಗರಿಕರು ಅದ್ದೂರಿಯಾಗಿ ಸ್ವಾಗತಿಸಿ ಗುರುಪೂಜೆ ನಡೆಸಿದರು.
ಶ್ರೀಗಳನ್ನು ಬಿಕಾಸಿ ತಾರಿಬಾಗಿಲಿನಿಂದ ಬರಮಾಡಿಕೊಂಡು ಕೊಂಬು ಕಹಳೆ ವಾದ್ಯ ಚಂಡೆ ಮೊದಲಾದವುಗಳಿಂದ ಕೂಡಿದ ವೈಭವದ ಮೆರವಣಿಗೆಯಲ್ಲಿ ಶರಾವತಿ ನದಿ ತೀರಕ್ಕೆ ಬಂದು ಅಲ್ಲಿ ಶ್ರೀಗಳಿಂದ ಗಂಗಾಪೂಜೆ ನೆರವೇರಿಸಲಾಯಿತು.
ಬಳಿಕ ಸಾಲಂಕೃತ ತೆಪ್ಪದಲ್ಲಿ ಪೇಜಾವರ ಮಠದ ಪಟ್ಟದ ಶ್ರೀ ರಾಮ ವಿಠಲ ದೇವರನ್ನು ಮತ್ತು ಶ್ರೀಗಳನ್ನು ಕುಳ್ಳಿರಿಸಿ ಶರಾವತಿ ನದಿಯಲ್ಲಿ ತೆಪ್ಪೋತ್ಸವ ನಡೆಯಿತು. ಅಲ್ಲಿಂದ ಮಾವಿನ ಕುರ್ವೆಯ ಶ್ರೀ ನವದುರ್ಗಾ ದೇವಳಕ್ಕೆ ಆಗಮಿಸಲಾಯಿತು.
ಶ್ರೀದೇವಿಗೆ ಶ್ರೀಗಳು ಮಂಗಳಾರತಿ ಬೆಳಗಿದ ನಂತರ ಭಕ್ತರು ಗುರುಪಾದಪೂಜೆ ನೆರವೇರಿಸಿದರು. ತಮಗೆ ನೀಡಿದ ವೈಭವದ ಸ್ವಾಗತಕ್ಕೆ ಶ್ರೀಗಳು ತುಂಬು ಸಂತಸ ವ್ಯಕ್ತಪಡಿಸಿ ಶ್ರೀಗಳು ಅನುಗ್ರಹ ಸಂದೇಶ ನೀಡಿದರು.. ಅಲ್ಲಿಯೇ ಪಟ್ಟದ ದೇವರ ರಾತ್ರಿ ಪೂಜೆಯನ್ನೂ ಶ್ರೀಗಳು ನೆರವೇರಿಸಿದರು . ಸ್ಥಳೀಯ ಧಾರ್ಮಿಕ ಮುಖಂಡರಾದ ಗೋಪಾಲಕೃಷ್ಣ ಮತ್ತು ತಂಡದವರು ಈ ಕಾರ್ಯಕ್ರಮ ಸಂಯೋಜಿಸಿದರು .