ಉಡುಪಿ: ಯುವವಾಹಿನಿ ಉಡುಪಿ ಘಟಕದ ವತಿಯಿಂದ ನೀಡಲಾಗುವ ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿ ಅನ್ನು ಹಿರಿಯ ಜನಪದ ವಿದ್ವಾಂಸರೂ, ಮೈಸೂರು ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾಗಿರುವ ಪ್ರೊ. ಬಿ.ಶಿವರಾಮ ಶೆಟ್ಟಿ ಅವರಿಗೆ ಹಾಗೂ ಯಕ್ಷಗಾನದ ಹಾಸ್ಯ ಕಲಾವಿದರೂ, ಹೂವಿನಕೋಲು, ಚಿಕ್ಕಮೇಳ ತಂಡಗಳ ನಿರ್ವಾಹಕರೂ ಆಗಿರುವ ಸೀತಾರಾಮ ಕಟೀಲ್ ಅವರಿಗೆ ಬನ್ನಂಜೆ ಬಾಬು ಅಮೀನ್ ಜಾನಪದ ಕಲಾವಿದ ಪ್ರಶಸ್ತಿಯನ್ನು ಚಿಟ್ಪಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್ನ ಲಕ್ಷ್ಮೀ ಸಭಾಭವನದಲ್ಲಿ ಭಾನುವಾರ ಪ್ರದಾನ ಮಾಡಲಾಯಿತು.
ತೆಂಕನಿಡಿಯೂರು ಸರಕಾರಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿರುವ ಡಾ.ಸುರೇಶ್ ರೈ ಕೆ. ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಪ್ರೊ. ಬಿ.ಶಿವರಾಮ ಶೆಟ್ಟಿ ಮಾತನಾಡಿ, ತುಳುವರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸಿಮೀತರಾದವರಲ್ಲ. ಅವರು ಎಲ್ಲರನ್ನು ಒಗ್ಗಟ್ಟಿನಲ್ಲಿ ಕೊಂಡೊಯ್ಯುವವರು. ಇದಕ್ಕೆ ಅವರಲ್ಲಿರುವ ಹೃದಯವೈಶಾಲ್ಯತೆಯೇ ಸಾಕ್ಷಿ. ಆದರೆ, ಪ್ರಸ್ತುತ ಧಾರ್ಮಿಕ ಸಮಾಜ ಸೃಷ್ಟಿಯಾಗುತ್ತಿದೆ. ಇದು ಸೃಜನಶೀಲತೆಗೆ ಪೆಟ್ಟು ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಜಾನಪದಕ್ಕೆ ಉಸಿರುಕೊಡುವ ಶಕ್ತಿಯಿದೆ. ಜಾನಪದ ಕ್ಷೇತ್ರದಲ್ಲಿ ಬನ್ನಂಜೆ ಬಾಬು ಅಮೀನ್ ದೊಡ್ಡ ಹೆಸರು. ಅವರ ಸಂಶೋಧನೆಗಳು ಸಮಾಜಕ್ಕೆ ಅಗತ್ಯವಿದೆ. ಅವರ ಹೆಸರಿನಲ್ಲಿ ನೀಡುವ “ಬನ್ನಂಜೆ ಅಮೀನ್ ಪ್ರಶಸ್ತಿ” ಎಲ್ಲೆಡೆ ಪಸರಿಸುವಂತಾಗಲಿ ಎಂದು ಹಾರೈಸಿದರು.
ಅಭಿನಂದನಾ ಭಾಷಣ ಮಾಡಿದ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ದುಗ್ಗಪ್ಪ ಕಜೆಕಾರ್ ಅವರು, ಸಂಶೋಧನೆ ಅನ್ನೋದು ಕೇವಲ ಪಿಎಚ್ ಡಿ ಅಲ್ಲ, ಅದೊಂದು ವ್ಯವಸ್ಥಿತ ಅಧ್ಯಯನ. ಈಗ ಪಿಎಚ್ ಡಿಯ ಉಪಯೋಗ ಸರಿಯಾಗಿ ಆಗುತ್ತಿಲ್ಲ. ಅದರ ಪ್ರಯೋಜನ ನಾಲ್ಕು ಮಂದಿಗಾದರೂ ಸಿಗಬೇಕು. ಬನ್ನಂಜೆ ಬಾಬು ಅಮೀನ್ ಅವರ ಸಂಶೋಧನೆ ಎಲ್ಲರಿಗೂ ತಲುಪಿದೆ ಎಂದರು.
ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ಪ್ರವೀಣ್ ಡಿ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಹಾಗೂ ಯುವ ವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಕೆ. ರಾಜೀವ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೂಬಿಕ್ಸ್ ಕ್ಯೂಬ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಹೇಶ್ ಮಲ್ಪೆ ಅವರನ್ನು ಗೌರವಿಸಲಾಯಿತು. ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಭಾಸ್ಕರ್ ಸುವರ್ಣ ಸ್ವಾಗತಿಸಿದರು.