ಉಡುಪಿ: ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಆಟೊ ಚಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಉಡುಪಿ ಶಿವಳ್ಳಿ ಗ್ರಾಮದ ಬುಡ್ನಾರು ಅಂಗನವಾಡಿ ಬಳಿಯ ಅಬ್ಬಾಸ್ ಕಂಪೌಂಡ್ ಎಂಬಲ್ಲಿ ನಡೆದಿದೆ.
ಸುರೇಂದ್ರ ಎಸ್. ಸಾಲ್ಯಾನ್ (46) ಮೃತ ಆಟೊ ಚಾಲಕ. ಇವರು ಬುಡ್ನಾರು ಅಂಗನವಾಡಿ ಬಳಿಯ ಅಬ್ಬಾಸ್ ಕಂಪೌಂಡ್ ನಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಪುಷ್ಪಾ ಅವರೊಂದಿಗೆ ವಾಸಿಸುತ್ತಿದ್ದರು.
ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದ ಇವರು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನ.16ರಂದು ಡಿ.ಡಿ.ಟಿ ಪೌಡರನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದರಿಂದ ತೀವ್ರ ಅಸ್ವಸ್ಥರಾಗಿದ್ದ ಸುರೇಂದ್ರ ಅವರನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನ.26ರಂದು ರಾತ್ರಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.