ಜಗತ್ತಿನ ನಿದ್ದೆಗೆಡಿಸಿದ “ಓಮಿಕ್ರಾನ್” ಕೊರೊನಾ ರೂಪಾಂತರ; ಈ ಹೊಸ ವೈರಸ್ ನ ಸಂಪೂರ್ಣ ವಿವರ ಇಲ್ಲಿದೆ.!!

ಕೇಪ್ಟೌನ್: ದಕ್ಷಿಣ ಆಫ್ರಿಕಾದಲ್ಲಿ ‘ಓಮಿಕ್ರಾನ್’ ಹೊಸ ರೂಪಾಂತರ ಕೊರೊನಾ ವೈರಸ್‌ ಪತ್ತೆಯಾಗಿದ್ದು, ಇಡೀ ಜಗತ್ತಿನಾದ್ಯಂತ ಭಾರೀ ಆತಂಕ ಮೂಡಿಸಿದೆ.

ಈ ಹೊಸ ತಳಿ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಇದರ ವಿರುದ್ಧ ಕೋವಿಡ್‌-19 ತಡೆ ಲಸಿಕೆಗಳು ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನಾ, ಜಿಂಬಾಬ್ವೆ, ನಮೀಬಿಯಾ ಮತ್ತು ಲೆಸೊಟೊ ದೇಶದಲ್ಲಿ ಈ ತಳಿಯ ವೈರಾಣು ತಗುಲಿರುವ ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾದಲ್ಲಿ ಈ ತಿಂಗಳ ಆರಂಭದಿಂದ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಏರಿಕೆಗೆ ಓಮಿಕ್ರಾನ್ ತಳಿಯೇ ಕಾರಣವಾಗಿರಬಹುದು. ದಕ್ಷಿಣ ಆಫ್ರಿಕಾದ ನೆರೆಯ ದೇಶಗಳಿಗೂ ಈ ರೂಪಾಂತರ ತಳಿಯು ಹರಡಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಘಟಕವು ಹೇಳಿದೆ.

ಈ ವೈರಸ್ ಅನ್ನು ನಿಯಂತ್ರಿಸದೇ ಇದ್ದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಬ್ರಿಟನ್‌ನ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್‌, ಬೆಲ್ಜಿಯಂ ಮತ್ತು ಹಾಂಗ್‌ಕಾಂಗ್‌ನಲ್ಲಿ ಈ ತಳಿಯ ವೈರಾಣು ತಗುಲಿರುವ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.

ಈ ತಳಿಯ ವೈರಾಣು ಪತ್ತೆಯಾಗಿರುವ ಆಫ್ರಿಕಾದ ಆರು ರಾಷ್ಟ್ರಗಳಿಂದ ವಿಮಾನ ಸಂಚಾರವನ್ನು ಹಲವು ದೇಶಗಳು ನಿಷೇಧಿಸಿವೆ. ಬ್ರಿಟನ್, ಜರ್ಮನಿ ಮತ್ತು ಇಟಲಿ ಈ ದೇಶಗಳಿಗೆ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ನಂತರ, ಮಲೇಷ್ಯಾ, ಸಿಂಗಪುರ, ಇಸ್ರೇಲ್ ಇದನ್ನೇ ಅನುಸರಿಸಿದವು. ಆನಂತರ ಐರೋಪ್ಯ ಒಕ್ಕೂಟವೂ ಈ ದೇಶಗಳಿಗೆ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.