ಉಡುಪಿ: ರಂಗಭೂಮಿಯ ಹಿರಿಯ ಸಂಗೀತ ನಿರ್ದೇಶಕ ಕೆ.ರಾಘವೇಂದ್ರ ಇಂದು (ನ.26) ಬೆಳಿಗ್ಗೆ 7.30ಕ್ಕೆ ಸ್ವಗೃಹದಲ್ಲಿ ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ರಂಗಭೂಮಿ ರಂಗಭೂಮಿ (ರಿ.) ಉಡುಪಿ ತಂಡದ ಬಹಳಷ್ಟು ನಾಟಕಗಳಿಗೆ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ರಂಗಭೂಮಿ ತಂಡ ಭಾಗವಹಿಸಿದ್ದ ಹಲವಾರು ನಾಟಕ ಸ್ಪರ್ಧೆಗಳಲ್ಲಿ ಸಂಗೀತಕ್ಕೆ ಬಹುಮಾನ ಇವರಿಗೆನೇ ಮೀಸಲು ಎಂಬಂತಿತ್ತು.
ಒಂದು ಕಾಲದಲ್ಲಿ ಉಡುಪಿಯ ಪರಿಸರದಲ್ಲಿ ಪ್ರಖ್ಯಾತಿಗಳಿಸಿದ್ದ “ರಂಗಭೂಮಿ” ಆರ್ಕೆಸ್ಟ್ರಾ ತಂಡವನ್ನು ಮುನ್ನಡೆಸಿದ್ದರು. ಹಲವು ಬಾರಿ ರಂಗಭೂಮಿಯ ನಾಟಕ ಸ್ಪರ್ಧೆಗೆ ತೀರ್ಪುಗಾರರಾಗಿದ್ದರು. ಈ ಹಿಂದೆ ಎಲ್ಐಸಿ ಯ ಉದ್ಯೋಗಿಯಾಗಿದ್ದು, ನಿವೃತ್ತ ಜೀವನ ನಡೆಸುತ್ತಿದ್ದರು. ಬಹಳಷ್ಟು ಜನರನ್ನು ಸಂಗೀತ ಕ್ಷೇತ್ರಕ್ಕೆ ತಂದು ಮುನ್ನಡೆಸಿದ ಕೀರ್ತಿ ಇವರದ್ದು. “ರಂಗಭೂಮಿ” ಸಂಸ್ಥೆಯು ಅವರು ಸಂಸ್ಥೆಗೆ ನೀಡಿರುವ ಅಪಾರ ಸೇವೆಯನ್ನು ಸ್ಮರಿಸುತ್ತಾ ಶೃದ್ಧಾಂಜಲಿ ಸಲ್ಲಿಸುತ್ತಿದೆ.
ಮೃತರ ಅಂತ್ಯ ಸಂಸ್ಕಾರದ ವಿಧಿವಿಧಾನವು ಇಂದು ಬೆಳಗ್ಗೆ 10ಕ್ಕೆ ಕಡಿಯಾಳಿ ಕಟ್ಟೆ ಆಚಾರ್ಯ ಮಾರ್ಗದಲ್ಲಿ ಇರುವ ಅವರ ಮನೆಯಲ್ಲಿ ನಡೆಯಲಿದೆ.