ಜರ್ಮನಿಯಲ್ಲಿ ಕೊರೊನಾ ಸ್ಫೋಟ: ಒಂದೇ ದಿನ 80 ಸಾವಿರ ಮಂದಿಯಲ್ಲಿ ಸೋಂಕು ಪತ್ತೆ; ಭಾರತಕ್ಕೆ ಎಚ್ಚರಿಕೆಯ ಕರೆಘಂಟೆ..!!

ಜರ್ಮನಿ: ಕೋವಿಡ್ 19 ಹೊಸ ರೂಪಾಂತರ ವೈರಸ್ ಗೆ ಜರ್ಮನಿ ದೇಶ ಅಕ್ಷರಶಃ ನಲುಗಿ ಹೋಗಿದೆ. ಕೇವಲ 8 ಕೋಟಿ ಜನಸಂಖ್ಯೆ ಹೊಂದಿರುವ ಜರ್ಮನಿಯಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 79,051 ಜನರಲ್ಲಿ ಸೋಂಕು ಕಾಣಿಕೊಂಡಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಈಗಾಗಲೇ ಸುಮಾರು 56 ಲಕ್ಷ ಜನರಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ಸೋಂಕಿನಿಂದಾಗಿ ಸಾವಿನಪ್ಪಿದವರ ಸಂಖ್ಯೆ 1 ಲಕ್ಷದ ಗಡಿಯನ್ನು ದಾಟಿದೆ. ಅಷ್ಟಾಗಿಯೂ ಇಲ್ಲಿಯೂ ಸಾವಿನ ಪ್ರಮಾಣವನ್ನು ಸಂಪೂರ್ಣವಾಗಿ ಬಹಿರಂಗ ಮಾಡಿಲ್ಲ ಎಂದೂ ಹೇಳಲಾಗುತ್ತಿದೆ.

ಕೊರೊನಾ ನಿಯಂತ್ರಣದಲ್ಲಿ ಜರ್ಮನಿ ಇಡೀ ಯೂರೋಪ್​ನಲ್ಲಿಯೇ ಮುಂಚೂಣಿ ದೇಶವಾಗಿತ್ತು. ಆದರೆ ಈಗ ದೇಶಾದ್ಯಂತ ಕೊರೊನಾ ವ್ಯಾಪಿಸಿದ್ದು, 80 ಸಾವಿರ ಕೇಸ್​ಗಳು ಪತ್ತೆಯಾಗಿರುವುದು ಇಡೀ ವಿಶ್ವಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಸೋಂಕು ಹರಡಲು ಕಾರಣವೇನು?.
ಜರ್ಮನಿಯ 8.30 ಕೋಟಿ ಜನಂಖ್ಯೆಯ ಪೈಕಿ ಬರೋಬ್ಬರಿ 5 ಕೋಟಿ 66 ಲಕ್ಷ ಜನ ಸಂಪೂರ್ಣ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಸುಮಾರು 66 ಲಕ್ಷ ಜನ ಬೂಸ್ಟರ್​ ಡೋಸ್ ಕೂಡ ಪಡೆದುಕೊಂಡಿದ್ದಾರೆ. ಹೀಗಿದ್ದರೂ ಸೋಂಕು ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.

ನನಗೇನು ಆಗಲ್ಲ ಅನ್ನೋ ಉಡಾಫೆ ಜೊತೆಗೆ ಮಾಸ್ಕ್, ಸೋಶಿಯಲ್ ಡಿಸ್ಟನ್ಸ್ ಮುಂತಾದ ಕೋವಿಡ್​ ಪ್ರೋಟೊಕಾಲ್​ ಬಗ್ಗೆ ಜನ ನಿರ್ಲಕ್ಷ್ಯ ತೋರಿರುವುದೇ ಸೋಂಕು ಹರಡಲು ಕಾರಣ ಎನ್ನಲಾಗಿದೆ. ಹೀಗಾಗಿ ಭಾರತೀಯರೂ ಎಚ್ಚರಿಕೆ ವಹಿಸಬೇಕಿದೆ. ಭಾರತದಲ್ಲಿ ವ್ಯಾಕ್ಸಿನೇಷನ್​ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ಇನ್ನೂ ಹಲವಾರು ಲಕ್ಷ ಜನ ಸೆಕೆಂಡ್ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ.