ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಗೆ ₹ 2.52 ಕೋಟಿ ನಿವ್ವಳ ಲಾಭ: ಯಶ್‌ಪಾಲ್ ಸುವರ್ಣ

ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ 2020-21ನೇ ಸಾಲಿನಲ್ಲಿ 158 ಕೋಟಿ ವ್ಯವಹಾರದ ಮೂಲಕ ₹2.52 ಕೋಟಿ ನಿವ್ವಳ ಲಾಭ ಗಳಿಸಿದೆ. ಕರ್ನಾಟಕ ರಾಜ್ಯ ಸರಕಾರದ ಮೀನುಗಾರಿಕ ಇಲಾಖೆ, ಸಂಸ್ಥೆಯ ಸದಸ್ಯ ಸಹಕಾರಿ ಸಂಸ್ಥೆಗಳು ವೈಯಕ್ತಿಕ ಸದಸ್ಯರು ಹಾಗೂ ಸಮಸ್ತ ಮೀನುಗಾರರ ಸಹಕಾರದಿಂದ ಮೀನು ಮಾರಾಟ, ಡೀಸಿಲ್ ಮಾರಾಟ, ಆರ್ಥಿಕ ಸೇವೆ, ಮೋಬಿಲ್ ಎಣ್ಣೆ ಮಾರಾಟ, ಸೀಮೆಎಣ್ಣೆ ಹಾಗೂ ಮೀನುಗಾರಿಕಾ ಸಲಕರಣೆಗಳ ಮಾರಾಟ ಮತ್ತು ಮಂಜುಗಡ್ಡೆ ವ್ಯವಹಾರಗಳಿಂದ 158 ಕೋಟಿ ವ್ಯವಹಾರ ಮಾಡಿ ನಿರ್ವಹಣಾ ವೆಚ್ಚ, ಸವಕಳಿ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಕಳೆದು ₹ 2.52 ಕೋಟಿ ನಿವ್ವಳ ಲಾಭ ದಾಖಲಿಸಿರುವುದಾಗಿ ಫೆಡರೇಶನಿನ ಅಧ್ಯಕ್ಷ ಯಶ್‌ಪಾಲ್ ಎ ಸುವರ್ಣ ತಿಳಿಸಿದ್ದಾರೆ.

ಮೀನುಗಾರರ ಅಭಿವೃದ್ಧಿಗಾಗಿ ಸ್ಥಾಪನೆಗೊಂಡ ಈ ಸಂಸ್ಥೆ ಮೀನುಗಾರರಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಹಕರಿಸುತ್ತಾ ಮೀನುಗಾರರ ಸ್ವಾವಲಂಬನೆಗಾಗಿ ಪ್ರಯತ್ನಿಸುತ್ತಿದ್ದು, ಹಿಂದಿನ ಹಲವು ವರ್ಷಗಳಿಂದ ಹಲವಾರು ತಾಂತ್ರಿಕ ಕಾರಣಗಳಿಂದ ನಷ್ಟದಲ್ಲಿದ್ದ ಈ ಸಂಸ್ಥೆಯು ಮೀನುಗಾರಿಕೆಗೆ ಉಂಟಾದ ಏರಿಳಿತಗಳ ಸಮಸ್ಯೆಯನ್ನು ಎದುರಿಸಿಕೊಂಡು ಇತ್ತಿಚಿನ 12 ವರ್ಷಗಳಲ್ಲಿ ಒಟ್ಟು 35 ಕೋಟಿ ಲಾಭ ಗಳಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥಗಳೊಂದಿಗೆ ಗುರುತಿಸಿಕೊಂಡಿದೆ.

ಮಲ್ಪೆ ಮತ್ತು ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಸದಸ್ಯರಿಗೆ ಯಶಸ್ವಿ ಆರ್ಥಿಕ ಸೇವಾ ಸೌಲಭ್ಯವನ್ನು ನೀಡಲಾಗುತ್ತಿದ್ದು, ಫೆಡರೇಶನಿನ ಆರ್ಥಿಕ ಸೇವಾ ವಿಭಾಗ, ಮೀನುಗಾರಿಕ ಸಲಕರಣೆಗಳ ಮಾರಾಟ ವಿಭಾಗ ಮತ್ತು ಫೆಡರೇಶನಿನ ಕಚೇರಿಗಳಲ್ಲಿ ಗಣಕೀಕರಣವನ್ನು ಅಳವಡಿಸಿ ಸದಸ್ಯರಿಗೆ ಆಧುನಿಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವರದಿ ಸಾಲಿನಲ್ಲಿ ಕೋವಿಡ್ -19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಜಾಗತಿಕವಾಗಿ ಎಲ್ಲಾ ವ್ಯವಹಾರಗಳಲ್ಲಿ ಏರುಪೇರಾಗಿದ್ದು, ಫೆಡರೇಶನಿನ ವ್ಯವಹಾರದಲ್ಲಿಯೂ ಏರಿಳಿತ ಉಂಟಾಗಿದ್ದರೂ ಫೆಡರೇಶನಿನ ವ್ಯವಹಾರಗಳು ಮತ್ತು ಸದಸ್ಯರಿಗೆ ನೀಡಿರುವ ಸೇವೆಯಿಂದಾಗಿ ವರದಿ ವರ್ಷದಲ್ಲಿ ಉತ್ತಮ ಲಾಭಗಳಿಸಿ ಪ್ರಗತಿ ಪಥದತ್ತ ಸಾಗುತ್ತಿದೆ. ಮುಂದಿನ ಸಾಲಿನಲ್ಲಿ ಆರ್ಥಿಕ ಸೇವಾ ವಿಭಾಗದಲ್ಲಿ ಇನ್ನಷ್ಟು ಆಧುನಿಕ ಸೌಲಭ್ಯಗಳಾದ “E Bix” cash Money transfer, International & Domestic (ಇ-ಬಿಕ್ಸ್ ನಗದು ಹಣ ವರ್ಗಾವಣೆ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ), ಆರ್.ಟಿ.ಜಿ.ಎಸ್ ಸೌಲಭ್ಯ, ಇ-ಸ್ಟಾಂಪಿಂಗ್ ಮತ್ತು ಇತರ ಎಲ್ಲಾ ತರಹದ ಸಾಲ ಸೌಲಭ್ಯಗಳನ್ನು ನೀಡುವ ಯೋಜನೆಯನ್ನು ರೂಪಿಸಲಾಗಿದೆ.

2020-21 ನೇ ಸಾಲಿನಲ್ಲಿಯೂ ಸಂಸ್ಥೆಯ ಸದಸ್ಯ ಸಹಕಾರಿ ಸಂಘಗಳ ಸದಸ್ಯರಿಗೆ ಸಿಗ್ನಾ ಪ್ರೋ ಹೆಲ್ತ್ ಗ್ರೂಪ್ ಇನ್ಸುರೆನ್ಸ್ ಕಾರ್ಡ್ನ್ನು ಉಚಿತವಾಗಿ ವಿತರಿಸಲಾಗಿದೆ. ದ.ಕ ಮತ್ತು ಉಡುಪಿ ಜಿಲ್ಲೆಯ ಸಂಸ್ಥೆಯ ಸದಸ್ಯರ ಮತ್ತು ಸದಸ್ಯೇತರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉಭಯ ಜಿಲ್ಲೆಯ ಬಡ ಮೀನುಗಾರರ ವೈದ್ಯಕೀಯ ಚಿಕಿತ್ಸೆಗಾಗಿ ಹಾಗೂ ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವು ಡುವ ಮೂಲಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿತೊಡಗಿಸಿಕೊಂಡಿದೆ.

ಮಲ್ಪೆ ಮೀನುಗಾರಿಕಾ ಬಂದರು ಮತ್ತು ಮಂಗಳೂರು ಮೀನುಗಾರಿಕಾ ಬಂದರಿನ ಹಲವೊಂದು ಸಮಸ್ಯೆಗಳ ಬಗ್ಗೆ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷರ ನೇತೃತ್ವದಲ್ಲಿ ಸಮಸ್ಯೆಯ ನಿವಾರಣೆಗಾಗಿ ಹಾಗೂ ಮೀನುಗಾರರು ಹಿಡಿದು ತಂದ ಮೀನಿಗೆ ಉತ್ತಮ ಮೌಲ್ಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಚಿವರನ್ನು ಭೇಟಿಯಾಗಿ ಮೀನುಗಾರಿಕೆಗೆ ಸಂಬಂಧಿಸಿದ ಎಲ್ಲಾ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ರಮ ಜರಗಿಸಲಾಗಿದೆ.

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ
ಸಹಕಾರದಿಂದ ಫೆಡರೇಶನ್ ವತಿಯಿಂದ ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಸಹಕಾರಿ ಸಂಸ್ಥೆಗಳಿಗೆ, ಮೀನುಗಾರ ಸಂಘಗಳಿಗೆ ಮತ್ತು ಎಲ್ಲಾ ವರ್ಗದ ಮೀನುಗಾರರಿಗೆ ಅನುಕೂಲವಾಗುವ ಉದ್ದೇಶದಿಂದ ಆಧುನೀಕೃತ ಮೀನುಗಾರಿಕೆ ಮತ್ತು ಮೀನಿನ ಉತ್ಪನ್ನಗಳ ಬಗ್ಗೆ ತಾಂತ್ರಿಕ ಮಾಹಿತಿಯನ್ನು ನೀಡುವ ಉದ್ದೇಶದಿಂದ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಸಮುದ್ರ ಮೀನುಗಾರಿಕೆಯ ಜೊತೆಗೆ ಒಳನಾಡಿನ ಸಿಹಿ ನೀರಿನ ಮೀನುಗಾರಿಕೆಯನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ ವೈಜ್ಞಾನಿಕ ರೀತಿಯಲ್ಲಿ ಒಳನಾಡಿನ ಮೀನು ಮರಿ ಉತ್ಪಾದನೆಯ ಬಗ್ಗೆ ಮತ್ತು ಮೀನು ಸಾಕಣಿಯ ಬಗ್ಗೆ ಅಧ್ಯಯನ ಮಾಡಿರುವ ಮತ್ತು ಆಳ ಜ್ಞಾನ ಹೊಂದಿರುವವರ ಸಹಕಾರವನ್ನು ಪಡೆದು ಮೀನು ಮರಿ ಉತ್ಪಾದನೆ ಮತ್ತು ಬಿತ್ತನೆಯ ಬಗ್ಗೆ ಹೊಸ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು.

ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಪ್ರಧಾನ ಕಚೇರಿ ಹಾಗೂ ಸಮುದಾಯ ಭವನ ನಿರ್ಮಾಣ ಹಾಗೂ ಕಾಪು ಮತ್ತು ಹಂಗಾರಕಟ್ಟೆಯಲ್ಲಿ ಆರ್ಥಿಕ ಸೇವಾ ವಿಭಾಗದ ಶಾಖೆಗಳ ಆರಂಭ ಹಾಗೂ ತಾಲೂಕು ಕೇಂದ್ರಗಳಲ್ಲಿ ಮತ್ಸ್ಯ ಕ್ಯಾಂಟೀನ್ ಆರಂಭಿಸುವ ಬಗ್ಗೆಯೂ ಆಡಳಿತ ಮಂಡಳಿ ಕಾರ್ಯಪ್ರವೃತ್ತವಾಗಿದೆ.

ಕೋವಿಡ್-19 ಸಾಂಕ್ರಾಮಿಕ ಮಹಾಮಾರಿ ರೋಗದ ಸಂದರ್ಭದಲ್ಲಿಯೂ ವರದಿ ಸಾಲಿನಲ್ಲಿ ಫೆಡರೇಶನ್ ಗರಿಷ್ಠ ಲಾಭ ಗಳಿಸಿದ್ದು, ಮುಂದೆ ಕೂಡ ಸಂಸ್ಥೆಯ ಸರ್ವ ಸದಸ್ಯರ ಸಹಕಾರ ಹಾಗೂ ಮೀನುಗಾರರ ಸಹಕಾರದಿಂದ ಸಂಸ್ಥೆಯನ್ನು ಅಭಿವೃದ್ಧಿಯಿಂದ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದಾಗಿ ಯಶ್‌ಪಾಲ್ ಎ ಸುವರ್ಣ ತಿಳಿಸಿದ್ದಾರೆ.