ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಕೇಂದ್ರ ಸರ್ಕಾರ 2022ರ ಮಾರ್ಚ್ ವರೆಗೆ ವಿಸ್ತರಣೆ ಮಾಡಿದೆ. ಈ ಯೋಜನೆ ಅಡಿಯಲ್ಲಿ ಪ್ರತೀ ವ್ಯಕ್ತಿಗೆ ಪ್ರತೀ ತಿಂಗಳು ಐದು ಕೆ.ಜಿ. ಆಹಾರ ಧಾನ್ಯ ಉಚಿತವಾಗಿ ದೊರೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್ಎಫ್ಎಸ್ಎ) ವ್ಯಾಪ್ತಿಯಲ್ಲಿ ಬರುವ 80 ಕೋಟಿಗೂ ಹೆಚ್ಚು ಜನರಿಗೆ ಯೋಜನೆಯಿಂದ ಅನುಕೂಲ ಆಗಲಿದೆ.
ಕೋವಿಡ್ ಸಾಂಕ್ರಾಮಿಕವು ತೀವ್ರವಾಗಿದ್ದ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಬಡಜನರಿಗೆ ನೆರವಾಗುವುದಕ್ಕಾಗಿ 2020ರ ಮಾರ್ಚ್ನಲ್ಲಿ ಈ ಯೋಜನೆಯನ್ನು ಘೋಷಿಸಲಾಗಿತ್ತು. ಎನ್ಎಫ್ಎಸ್ಎ ಅಡಿಯಲ್ಲಿ ₹2ರಿಂದ ₹3ರ ದರದಲ್ಲಿ ಜನರಿಗೆ ನೀಡಲಾಗುತ್ತಿರುವ ಆಹಾರ ಧಾನ್ಯದ ಜತೆಗೆ ಹೆಚ್ಚುವರಿಯಾಗಿ ಐದು ಕೆ.ಜಿಯನ್ನು ನೀಡಲಾಗುತ್ತಿದೆ.