ಉಡುಪಿ: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ.
ವಿವಾದಿತ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಪ್ರಮೋದ್, ರೈತರ ಅವಿರತ ಹೋರಾಟ ಮತ್ತು ಮನವಿಯನ್ನು ಪರಿಗಣಿಸಿ 3 ಕೃಷಿ ಕಾಯ್ದೆಯನ್ನು ವಾಪಾಸು ಪಡೆಯುವ ಐತಿಹಾಸಿಕ ನಿರ್ಧಾರ ಕೈಗೊಂಡ ಪ್ರಧಾನಿಯವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಮೂರ್ನಾಲ್ಕು ದಿನಗಳ ಹಿಂದೆ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರಿಗೆ ಪದ್ಮವಿಭೂಷಣ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರನ್ನು ಪ್ರಮೋದ್ ಬಾಯ್ತುಂಬ ಹೊಗಳಿದ್ದರು. ಇದೀಗ ಮತ್ತೆ ಪ್ರಧಾನಿಯವರನ್ನು ಅಭಿನಂದಿಸಿದ್ದಾರೆ. ಹೀಗಾಗಿ ಪ್ರಮೋದ್ ಅವರ ರಾಜಕೀಯ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.