ಎಲೆಕ್ಟ್ರಾನಿಕ್ಸ್ ವಸ್ತು, ಮದ್ಯ, ಜವಳಿ ಉತ್ಪನ್ನಗಳ ದರ ಮತ್ತಷ್ಟು ದುಬಾರಿ..!!

ನವದೆಹಲಿ: ಎಲೆಕ್ಟ್ರಾನಿಕ್ಸ್ ವಸ್ತುಗಳು, ಮದ್ಯ ಮತ್ತು ಜವಳಿ ಉತ್ಪನ್ನಗಳ ದರ ಶೀಘ್ರದಲ್ಲೇ ಶೇಕಡ 8 ರಿಂದ 10 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಿರುವ ಕಾರಣ ಈ ವಲಯದ ಉತ್ಪಾದಕ ಕಂಪನಿಗಳು ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿವೆ.

ಇದರ ಪರಿಣಾಮ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.ಕಿರಾಣಿ ಅಗತ್ಯ ವಸ್ತುಗಳು, ವೈಯಕ್ತಿಕ ಆರೈಕೆ ಉತ್ಪನ್ನಗಳು, ಪ್ಯಾಕೇಜ್ ಮಾಡಿದ ಆಹಾರಗಳು ಮತ್ತು ಊಟವನ್ನು ಮಾರಾಟ ಮಾಡುವ ಕಂಪನಿಗಳು ಈಗಾಗಲೇ ಬೆಲೆಗಳನ್ನು ಹೆಚ್ಚಿಸಿವೆ. ಹೊಸ ವರ್ಷದ ವೇಳೆಗೆ ಮತ್ತೊಮ್ಮೆ ದರ ಹೆಚ್ಚಳ ಜಾರಿಗೆ ಬರಬಹುದು ಎನ್ನಲಾಗಿದೆ.

ಸಗಟು ದರ ಹಣದುಬ್ಬರವು ಉದ್ಯಮಗಳಿಗೆ ತಗುಲುವ ವೆಚ್ಚವನ್ನು ಸೂಚಿಸುವಂಥ ಸೂಚ್ಯಂಕವಾಗಿದೆ. ಈಗಾಗಲೇ ಸತತ ಆರನೇ ತಿಂಗಳು ಎರಡಂಕಿ ಮುಟ್ಟಿದೆ. ಇನ್ನು ಚಿಲ್ಲರೆ ಹಣದುಬ್ಬರ ದರವು ಸೆಪ್ಟೆಂಬರ್ ನಲ್ಲಿ ಶೇ 4.35ಕ್ಕೆ ಕುಸಿತ ಕಂಡಿದೆ. ಸಗಟು ದರ ಹಣದುಬ್ಬರ ಹಾಗೂ ಚಿಲ್ಲರೆ ಹಣದುಬ್ಬರದ ಮಧ್ಯದ ವ್ಯತ್ಯಾಸವು ಹೆಚ್ಚುವರಿ ವೆಚ್ಚವಾಗಿದ್ದು, ಅದನ್ನು ಗ್ರಾಹಕರಿಗೆ ವರ್ಗಾಯಿಸಬೇಕಾಗುತ್ತದೆ.

ಗಾಜು, ಹತ್ತಿ, ಉಕ್ಕು, ಚಿಪ್ ಗಳು ಮತ್ತು ರಾಸಾಯನಿಗಳು ಇಂಥ ಕಚ್ಚಾ ವಸ್ತುಗಳ ಬೆಲೆಯಲ್ಲಿ ತೀವ್ರವಾದ ಏರಿಕೆ ಆಗಿದ್ದು, ಉದ್ಯಮಗಳ ಮಾಲೀಕರಿಗೆ ಬರಬೇಕಾದ ಲಾಭದ ಮಾರ್ಜಿನ್ ನಲ್ಲಿ ಕಡಿಮೆ ಆಗುವಂತಾಗಿದೆ.