ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಪೆಟ್ರೋಲ್, ಡಿಸೇಲ್ ದರವನ್ನು ಇಳಿಕೆ ಜನರಿಗೆ ಹಬ್ಬದ ಗಿಫ್ಟ್ ಕೊಟ್ಟಿದೆ.
ಕೇಂದ್ರ ಸರ್ಕಾರವು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹10, ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹5 ತಗ್ಗಿಸಿದೆ. ಇದರ ಬೆನ್ನಿಗೇ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರಿಗೆ ತಲಾ ₹7 ಕಡಿಮೆ ಮಾಡಲು ರಾಜ್ಯ ಸರ್ಕಾರವೂ ತೀರ್ಮಾನಿಸಿದೆ.
ಕೇಂದ್ರ ಸರ್ಕಾರವು ಬುಧವಾರ ಕೈಗೊಂಡಿರುವ ತೀರ್ಮಾನವು ತೈಲೋತ್ಪನ್ನಗಳ ಎಕ್ಸೈಸ್ ಸುಂಕದಲ್ಲಿ ಇದುವರೆಗೆ ಆಗಿರುವ ಅತಿದೊಡ್ಡ ಕಡಿತ. 2020ರ ಮಾರ್ಚ್–ಮೇ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕ್ರಮವಾಗಿ ₹13 ಹಾಗೂ ₹ 16ರಷ್ಟು ಏರಿಸಲಾಗಿತ್ತು. ಈ ಏರಿಕೆಯ ನಂತರ ಪೆಟ್ರೋಲ್ ಮೇಲಿನ ಕೇಂದ್ರದ ತೆರಿಗೆಗಳು ಲೀಟರಿಗೆ ₹ 32.9ಕ್ಕೆ ಹಾಗೂ ಡೀಸೆಲ್ ಮೇಲಿನ ಕೇಂದ್ರದ ತೆರಿಗೆಗಳು ಲೀಟರಿಗೆ ₹ 31.8ಕ್ಕೆ ತಲುಪಿದ್ದವು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಹೆಚ್ಚಳವಾದ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದವು. ಪೆಟ್ರೋಲ್ ಬೆಲೆಯು ದೇಶದ ಬಹುತೇಕ ಕಡೆಗಳಲ್ಲಿ ಲೀಟರಿಗೆ ₹ 100ರ ಗಡಿ ದಾಟಿತು. ಡೀಸೆಲ್ ಬೆಲೆ ಕೂಡ ಹಲವು ಕಡೆಗಳಲ್ಲಿ ₹ 100ಕ್ಕಿಂತ ಹೆಚ್ಚಾಯಿತು.
ಸತತ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ , ಸರ್ಕಾರವು ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಇಳಿಕೆ ಮಾಡಿರುವುದರಿಂದ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.