ಉಡುಪಿ: ಅಂಪಾರಿನಲ್ಲಿ ಅ.18 ರಂದು ನಡೆದ ನಾಗರಾಜ್ ಆತ್ಮಹತ್ಯೆ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ನಾಗರಾಜ್ ಪತ್ನಿ ಮಮತಾ (34), ಆಕೆಯ ಪರಿಚಿತ ಕುಮಾರ್ ಹಾಗೂ ದಿನಕರ ಎಂಬವರನ್ನು ಬಂಧಿಸಲಾಗಿದೆ. ಇಬ್ಬರು ಅಪ್ರಾಪ್ತರನ್ನು ರೀಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ.
ಮೃತ ನಾಗರಾಜ್ ಸಹೋದರಿ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಪೊಲೀಸರಿಗೆ ದೂರುನೀಡಿದ್ದರು. ಅದರಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ನಾಗರಾಜ್ ಜೀವನದಲ್ಲಿ ಜಿಗುಪ್ಸೆಗೊಂಡು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪತ್ನಿ ಮಮತಾ ಪೊಲೀಸರಿಗೆ ದೂರು ನೀಡಿದ್ದರು. ಮೃತದೇಹವನ್ನು ಪರೀಕ್ಷಿಸಿದ ಸಹೋದರಿ ಶಿವಮೊಗ್ಗ ಜಿಲ್ಲೆಯ ಮಾಲ್ವೆ ಗ್ರಾಮದ ನಿವಾಸಿ ನಾಗರತ್ನ ಹಾಗೂ ಸಂಬಂಧಿಕರು, ಮೃತದೇಹದ ಮೈ ಮೇಲೆ ಹಾಗೂ ಕುತ್ತಿಗೆ ಭಾಗದಲ್ಲಿ ಗಾಯಗಳಿರುವುದನ್ನು ಗುರುತಿಸಿದ್ದಾರೆ. ಅಲ್ಲದೆ, ನಾಗರಾಜ ಕೆಲ ದಿನಗಳ ಹಿಂದೆ ಸಹೋದರಿಗೆ ಕರೆ ಮಾಡಿ ಪತ್ನಿ ಮತ್ತು ಕೆಲವರು ಸೇರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದರು. ಆದ್ದರಿಂದ ಅಣ್ಣನನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಸಹೋದರಿ ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.