ಹೊಸದಿಲ್ಲಿ: ಐಪಿಎಲ್ 12ನೇ ಆವೃತಿಯ ಪಂದ್ಯಾಟ ಮಾ. 23ರಿಂದ ಆರಂಭಗೊಳ್ಳಲಿದೆ. ಒಂದುಕಡೆ ಲೋಕಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದ್ದರೆ, ಮತ್ತೊಂದು ಕಡೆ ಐಪಿಎಲ್ಗೆ ಕ್ಷಣಗಣನೆ ಶುರುವಾಗಿದೆ.
ಈಗಾಗಲೇ ಲೀಗ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಮಾ. 23ರಿಂದ ಮೇ.5ರ ವರೆಗೆ ದೇಶದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಐಪಿಎಲ್ 12ನೇ ಆವೃತ್ತಿಯ ಉದ್ಘಾಟನಾ ಸಮಾರಂಭ ಚೆನ್ನೈನಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಮೊದಲ ಪಂದ್ಯದಲ್ಲಿ ಚೆನ್ನೈ-ಆರ್ಸಿಬಿ ಮುಖಾಮುಖಿ
ಈ ಆವೃತಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೋಯಲ್ ಚ್ಯಾಲೆಂಜರ್ಸ್ ಬೆಂಗಳೂರು ತಂಡಗಳು ಎದುರಾಗಲಿವೆ.
ಕಳೆದ ಬಾರಿಯ ಚ್ಯಾಂಪಿಯನ್ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಧೋನಿ ನೇತೃತ್ವದ ಸಿಎಸ್ಕೆ ಈ ಬಾರಿಯೂ ಕಪ್ ಎತ್ತುವ ಹುಮ್ಮಸ್ಸಿನಲ್ಲಿದೆ.
ಇತ್ತ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಕೂಡ ಈ ಬಾರಿ ಉತ್ತಮ ಆಟಗಾರರನ್ನು ಹೊಂದಿದ್ದು, ಹೇಗಾದರೂ ಚ್ಯಾಂಪಿಯನ್ ಪಟ್ಟ ಅಲಂಕರಿಸಬೇಕೆನ್ನುವ ಯೋಜನೆ ರೂಪಿಸಿಕೊಂಡು ಗೆಲುವಿನೊಂದಿಗೆ ಪದಾರ್ಪಣೆ ಮಾಡಬೇಕೆನ್ನುವ ಪ್ಲ್ಯಾನ್ನಲ್ಲಿದೆ.
ಮೇಲ್ನೊಟ್ಟಕ್ಕೆ ಎರಡು ತಂಡಗಳು ಸಮಾಬಲ ಹೊಂದಿದ್ದರೂ, ಚೆನ್ನೈ ತಂಡದಲ್ಲಿ ಬ್ಯಾಟಿಂಗ್ ದಿಗ್ಗಜರಿದ್ದಾರೆ. ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್, ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಸೇರಿದಂತೆ ವಿದೇಶಿ ಆಟಗಾರರಾದ ಬ್ರಾವೋ, ಸ್ಯಾಮ್ ಬಿಲ್ಲಿಂಗ್ಸ್ ದೇಶಿ ಪ್ರತಿಭೆಗಳಾದ ಸುರೇಶ್ ರೈನಾ, ಅಂಬಾಟಿ ರಾಯುಡು, ಧೋನಿ ಮೊದಲಾದ ಹಿರಿಯ ಬ್ಯಾಟಿಂಗ್ ಬಲಾಡ್ಯರಿದ್ದಾರೆ. ಜತೆಗೆ ಆಲ್ ರೌಂಡರ್ ಬಲ ತಂಡಕ್ಕಿದೆ
ಇತ್ತ ಆರ್ಸಿಬಿಯಲ್ಲೂ ವಿರಾಟ್ ಕೊಹ್ಲಿ, ಯಾವ ಸಂದರ್ಭದಲ್ಲೂ ಪಂದ್ಯದ ಚಿತ್ರಣ ಬದಲಾಯಿಸಬಲ್ಲ ಎಬಿ ಡಿ ವಿಲಿಯರ್ಸ್, ಜತೆಗೆ ವಿಂಡೀಸ್ನ ಹೊಸ ಪ್ರತಿಭೆ ಶಿಮ್ರಾನ್ ಹೆಟ್ಮೆಯಾರ್, ಜತೆಗೆ ಮಾರ್ಕಸ್ ಸ್ಟೊಯ್ನಿಸ್, ಡಿ ಗ್ರ್ಯಾಂಡ್ಹೋಮ್ ತಂಡದಲ್ಲಿದ್ದಾರೆ. ಎರಡೂ ತಂಡಗಳ ಬೌಲಿಂಗ್ ವಿಭಾಗದಲ್ಲಿ ದೇಶಿ ಪ್ರತಿಭೆಗಳೇ ಹೆಚ್ಚಿದ್ದು, ಸಮಬಲ ಹೊಂದಿದೆ.