ಕೋವಿಡ್ ಹೆಚ್ಚಳ: ಮನೆಯ ಒಳಗೂ ಇಡೀ ದಿನ ಮಾಸ್ಕ್ ಧರಿಸಲು ಸೂಚನೆ

ಐಜ್ವಾಲ್: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಮನೆಯ ಒಳಗೂ ಇಡೀ ದಿನ, ಪ್ರತಿ ದಿನ (24/7) ಮಾಸ್ಕ್ ಧರಿಸುವಂತೆ ಸೂಚಿಸಿದೆ.

ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮಕೈಗೊಂಡಿದ್ದು, ಮನೆ ಮಂದಿಯೆಲ್ಲ ಜತೆಯಾಗಿ ಕುಳಿತುಕೊಂಡು ಊಟ ಮಾಡದಂತೆಯೂ ಸಲಹೆ ನೀಡಿದೆ.

ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಕೋವಿಡ್ ಪಾಸಿಟಿವಿಟಿ ದರ ಶೇ 15ರಿಂದ 30ರ ನಡುವೆ ಇರುವ ಕಾರಣ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ.
ಊಟ ಮಾಡುವ ಸಮಯ ಹೊರತುಪಡಿಸಿ ಮತ್ತೆಲ್ಲಾ ಸಂದರ್ಭದಲ್ಲಿಯೂ ಮನೆ ಒಳಗೂ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುತ್ತಿದೆ. ಆಗಾಗ ಕೈಗಳನ್ನು ಸ್ವಚ್ಛಗೊಳಿಸುವಂತೆಯೂ ಸ್ಯಾನಿಟೈಸರ್‌ಗಳನ್ನು ಬಳಸುವಂತೆಯೂ ತಿಳಿಹೇಳಲಾಗುತ್ತಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಒಂದು ತಿಂಗಳಿಂದೀಚೆಗೆ ಮಿಜೋರಾಂನಲ್ಲಿ ಪ್ರತಿ ದಿನ 1,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗಿದ್ದು, ಚಿಕಿತ್ಸೆಗೂ ತೊಡಕಾಗಿದೆ ಎನ್ನಲಾಗಿದೆ.