ಕೋಟ: ಭೋವಿ ಸಮುದಾಯದ ಕುಟುಂಬವೊಂದನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಹಳ್ಳಾಡಿಯ ಜನತಾ ಕಾಲೋನಿಯ ಮನೆಯೊಂದಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ಭಾನುವಾರ ಸಂಜೆ ನಡೆದಿದೆ.
20ಕ್ಕೂ ಹೆಚ್ಚು ಜನರಿಗೆ ಕ್ರೈಸ್ತ ಪ್ರವಚನ ನೀಡಲಾಗುತ್ತಿದೆ. ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ದಂಪತಿಯಿಂದ ಕ್ರೈಸ್ತ ಧರ್ಮದ ಬಗ್ಗೆ ಪಾಠ ನಡೆಯುತ್ತಿತ್ತು. ಪ್ರಕಾಶ್-ಜ್ಯೋತಿ ದಂಪತಿಯಿಂದ ಮತಾಂತರದ ಪಾಠದ ಜೊತೆಗೆ ಮತಾಂತರಗೊಳ್ಳುವಂತೆ ಪ್ರೇರೇಪಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಈ ಮಾಹಿತಿ ಪಡೆದ ಹಿಂಜಾವೇ ಕಾರ್ಯಕರ್ತರು ದಿಢೀರ್ ದಾಳಿ ಮಾಡಿದ್ದಾರೆ.
ಘಟನಾಸ್ಥಳಕ್ಕೆ ಕೋಟ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಮತಾಂತರ ಮಾಡುತ್ತಿದ್ದ ಆರೋಪದ ಮೇಲೆ ಜ್ಯೋತಿ, ಪ್ರಕಾಶ, ಮನೋಹರ, ರವಿ ಎಂಬುವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇವರು ಈ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಪರಿಸರದ ಇತರರನ್ನು ಮತಾಂತರ ಮಾಡುತ್ತಿದ್ದರು ಎನ್ನಲಾಗಿದೆ.
ಹಿಂಜಾವೇ ಕಾರ್ಯಕರ್ತರ ಪ್ರತಿಭಟನೆ:
ಮತಾಂತರ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಠಾಣೆ ಎದುರು ಜಮಾಯಿಸಿದ ಹಿಂಜಾವೇ ಕಾರ್ಯಕರ್ತರು, ಮತಾಂತರ ನಡೆಸುವವರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು.
ಕಳೆದ ಕೆಲವು ವರ್ಷಗಳಿಂದ ಹಳ್ಳಾಡಿ, ಶಿರಿಯಾರ, ಕಾಜ್ರಳ್ಳಿ ಮೊದಲಾದ ಒಳ ಪ್ರದೇಶಗಳಲ್ಲಿ ಸಂಚು ರೂಪಿಸಿ ಸಾಕಷ್ಟು ಭೋವಿ ಹಾಗೂ ಮೊಗವೀರ ಕುಟುಂಬಗಳನ್ನು ಆರೋಪಿಗಳು ಮತಾಂತರಗೊಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.