ಶಿರ್ವ: ಹೊಳೆಯಲ್ಲಿ ಮೀನಿಗೆ ಗಾಳ ಹಾಕಲು ಹೋಗಿದ್ದ ದೈವ ನರ್ತಕರೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನೀರುಪಾಲಾದ ಘಟನೆ ಶಿರ್ವ ನಡಿಬೆಟ್ಟು ಅಣೆಕಟ್ಟು ಬಳಿ ಭಾನುವಾರ ಸಂಜೆ ನಡೆದಿದೆ.
ಶಿರ್ವ ಮಟ್ಟಾರು ನಿವಾಸಿ ದಿಲೀಪ್ (33) ಮೃತ ದುರ್ದೈವಿ. ಮೂರು ಜನರ ತಂಡ ಮೀನಿಗೆ ಗಾಳ ಹಾಕಲು ಹೊಳೆ ಬದಿಗೆ ಹೋಗಿತ್ತು. ಈ ವೇಳೆ ದಿಲೀಪ್ ಆಕಸ್ಮಿಕವಾಗಿ ಹೊಳೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ದಿಲೀಪ್ ಚಿಕ್ಕ ವಯಸ್ಸಿನಲ್ಲೇ ಕರಾವಳಿಯಾದ್ಯಂತ ದೈವಸ್ಥಾನಗಳಲ್ಲಿ ದೈವ ನರ್ತಕರಾಗಿ, ಸೇವಕರಾಗಿ ಹೆಸರು ಮಾಡಿದ್ದರು. ಬಬ್ಬುಸ್ವಾಮಿ ದೈವದ ನರ್ತಕರಾಗಿ ಹೆಚ್ಚು ಪ್ರಸಿದ್ದಿ ಗಳಿಸಿದ್ದರು.
ಮುಂದುವರಿದ ಕಾರ್ಯಾಚರಣೆ:
ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು, ಅಗ್ನಿಶಾಮಕ ದಳ ಮತ್ತು ಮಲ್ಪೆಯ ಮುಳುಗು ತಜ್ಞ ಈಶ್ವರ್ ಮಲ್ಪೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ತಡರಾತ್ರಿವರೆಗೆ ಕಾರ್ಯಾಚರಣೆ ಮುಂದುವರಿದಿದ್ದು, ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಬೆಳಕಿನ ಆಡಚನೆಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇಂದು ಬೆಳ್ಳಿಗೆ ಮತ್ತೆ ಶೋಧ ಕಾರ್ಯ ಆರಂಭಗೊಂಡಿದೆ ಎಂದು ತಿಳಿದುಬಂದಿದೆ.