ಕುಂದಾಪುರ: ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂಬ ವಿಶ್ವಾಸ ಎಲ್ಲರಲ್ಲೂ ಇದೆ. ಆದರೆ ಅತಿಯಾದ ಆತ್ಮ ವಿಶ್ವಾಸ ಒಳ್ಳೇದಲ್ಲ. ಹಿಂದೆ ಅತಿಯಾದ ಆತ್ಮವಿಶ್ವಾಸದಿಂದಾಗಿ ವಾಜಪೇಯಿಯವರು ಮತ್ತೆ ಪ್ರಧಾನಿಯಾಗುತ್ತಾರೆ ಎಂದು ನಾವು ನಿರೀಕ್ಷಿಸಿ ಸುಮ್ಮನಿದ್ದೆವು. ಆದರೆ ವಾಜಪೇಯಿಯವರ ಸಾಧನೆಗಳನ್ನು ಜನರಿಗೆ ಸರಿಯಾಗಿ ತಿಳಿಸಲು ಎಡವಿದೆವು. ಆದರೆ ಈಗ ಹಾಗಾಗಬಾರದು. ನಾವೆಲ್ಲರೂ ಸೇರಿ ಮೋದಿಯವರ ಜನಪರ ಕಾರ್ಯಕ್ರಮಗಳನ್ನು ಪ್ರತೀ ಹಳ್ಳಿಗೂ ತಲುಪಿಸುವ ಕೆಲಸ ಮಾಡಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಕಾಂಗ್ರೆಸ್ ಅರವತ್ತು ವರ್ಷ ಮಾಡದ ಸಾಧನೆಯನ್ನು ನರೇಂದ್ರ ಮೋದಿಯವರು ಐದೇ ವರ್ಷದಲ್ಲಿ ಮಾಡಿದ್ದಾರೆ. ತಮ್ಮ ಆಡಳಿತದ ಐದು ವರ್ಷಗಳಲ್ಲಿ ಒಂದು ದಿನವೂ ವಿಶ್ರಾಂತಿ ಪಡೆದುಕೊಳ್ಳದೇ ಹಗಲಿರುಳು ದೇಶಕ್ಕಾಗಿ ದುಡಿದು ತನ್ನನ್ನು ತಾನು ಸಮರ್ಪಿಸಿಕೊಂಡ ಪ್ರಧಾನಿ ಮೋದಿಯವರು ಈ ದೇಶವನ್ನು ಮತ್ತೆ ಮುನ್ನಡೆಸಬೇಕು. ಖಂಡಿತವಾಗಿಯೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಪ್ರಧಾನಿಯಾದರೆ ಸಮೃದ್ದ ಭಾರತ:
ಭಾರತದ ನಾಯಕತ್ವವನ್ನು ಇನ್ಯಾರಿಗೋ ಕೊಡಲು ಸಾಧ್ಯವಿಲ್ಲ. ಭಾರತದ ನಾಯಕತ್ವವನ್ನು ಭಾರತದ ಬಗ್ಗೆ ಬದ್ದತೆ, ಆದ್ಯತೆ, ಸಂಸ್ಕೃತಿ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಕಾಳಜಿ ಇರುವಂತಹ ನರೇಂದ್ರ ಮೋದಿಯವರಿಗೆ ವಹಿಸಬೇಕು. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ಅವರಿಗೆ ಈ ದೇಶದ ಜವಾಬ್ದಾರಿಗಳನ್ನು ಕೊಡಬೇಕಾಗಿದೆ. ನಾಯಕತ್ವದ ವಿಚಾರದಲ್ಲಿ ನರೇಂದ್ರ ಮೋದಿಯವರೇ ಅಗ್ರಗಣ್ಯ ಸ್ಥಾನದಲ್ಲಿದ್ದಾರೆ ಎಂದವರು ಹೇಳಿದ್ದಾರೆ.