ಪೆರ್ಡೂರು ಗ್ರಾಪಂನಲ್ಲಿ ಅಭಿವೃದ್ಧಿ ಕಾರ್ಯ ನಿಂತು ಹೋಗಿದ್ದು, ಆಡಳಿತ ವ್ಯವಸ್ಥೆ ನಿಷ್ಕ್ರಿಯಗೊಂಡಿದೆ: ಗ್ರಾಪಂ ಉಪಾಧ್ಯಕ್ಷ ಚೇತನ್ ಶೆಟ್ಟಿ ಆರೋಪ

ಪೆರ್ಡೂರು: ಪೆರ್ಡೂರು ಗ್ರಾಪಂ ಅಧ್ಯಕ್ಷರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕಡತಗಳ ಕೆಲಸ ಕಾರ್ಯಗಳು ಆಗದೆ ಸಾರ್ವಜನಿಕರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಸಾಮಾನ್ಯ ಸಭೆ, ಕ್ರಿಯಾಯೋಜನೆ ತಯಾರಾಗದೆ ಕಳೆದ ಒಂದು ತಿಂಗಳಿನಿಂದ ಗ್ರಾಪಂ ಆಡಳಿತ ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದು ಪೆರ್ಡೂರು ಗ್ರಾಪಂ ಉಪಾಧ್ಯಕ್ಷ ಚೇತನ್ ಶೆಟ್ಟಿ ಆರೋಪಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿದೆ. ಜನರ ಪರ ನಿಲ್ಲಬೇಕಾದ ಸ್ಥಳೀಯಾಡಳಿತ, ಜನಪ್ರತಿನಿಧಿಗಳು ರಾಜಕೀಯ ಮಾಡುತ್ತಿದ್ದಾರೆ. ಗ್ರಾಮದ ಜನರು ಯಾವುದೇ ತಪ್ಪು ಮಾಡದಿದ್ದರೂ ಸಮಸ್ಯೆ ಎದುರಿಸುವಂತಾಗಿದೆ. ಇದೇ ರೀತಿಯ ವರ್ತನೆ ಮುಂದುವರಿದರೆ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಗ್ರಾಮದಲ್ಲಿ 9/11 ಸಮಸ್ಯೆ, ಕಟ್ಟಡ ಪರವಾನಿಗೆ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಂದ ಜನರು ಬಳಲುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೀಘ್ರವೇ ವಿಶೇಷ ಸಭೆ ಕರೆದು ಈ ಸಮಸ್ಯೆಯನ್ನು ಪರಿಹರಿಸಬೇಕು. ಸಮಸ್ಯೆ ಬಗೆಹರಿಯದಿದ್ದರೆ ಪಂಚಾಯತ್ ಗೆ ಮುತ್ತಿಗೆ ಹಾಕಿ ಬೀಗ ಜಡಿಯಲಾಗುವುದು ಎಂದು ಗ್ರಾಪಂ ಸದಸ್ಯರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ರಮೇಶ್ ಪೂಜಾರಿ, ದಿನೇಶ್ ಪೂಜಾರಿ, ಸಂತೋಷ್ ಕುಲಾಲ್, ನವೀನ್, ಉದಯ ಕುಲಾಲ್, ಶಾಂತ ರೈ, ಗಾಯತ್ರಿ, ಶೋಭಾ ಗಾಂಸ್, ರಾಘವೇಂದ್ರ, ಸತೀಶ್ ನಾಯ್ಕ್, ದಯಾನಂದ ಶೆಟ್ಟಿ, ಗ್ರಾಮಸ್ಥರಾದ ಜಯ ದೇವಾಡಿಗ, ಸಂತೋಷ್ ಶೆಟ್ಟಿ ಇದ್ದರು.