ಉಡುಪಿ: ಉಡುಪಿಯ ಶಿರೂರು ಮಠಕ್ಕೆ ಬಾಲಸನ್ಯಾಸಿಯ ನೇಮಕ ಸಂಬಂಧಿಸಿ ಹೈಕೋರ್ಟ್ ನೀಡಿರುವ ಆದೇಶದ ಬಗ್ಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬುಧವಾರ ಮಠದಲ್ಲಿ ಪ್ರತಿಕ್ರಿಯೆ ನೀಡಿದರು.
13 ವರ್ಷ ತುಂಬಿದ ಬಾಲಕನಿಗೆ ಪ್ರೌಢಿಮೆ ಇರುತ್ತದೆ. ಹೀಗಾಗಿ 13 ವರ್ಷ ತುಂಬಿದ ಬಾಲಕನಿಗೆ ಧಾರ್ಮಿಕತೆಯ ನೆಲೆಯಲ್ಲಿ ಸನ್ಯಾಸ ದೀಕ್ಷೆ ನೀಡುವುದು ತಪ್ಪಲ್ಲ ಎಂದು ಅಭಿಪ್ರಾಯಪಟ್ಟರು.
13ನೇ ವರ್ಷದಲ್ಲಿ ಸನ್ಯಾಸ ಸ್ವೀಕರಿಸಬಹುದು ಎಂಬ ಅಂಶ ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಆಣಿಮಾಂಡವ್ಯ ಎಂಬ ಮಹರ್ಷಿ ಮಹಾಭಾರತದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಹಾಗಾಗಿ ಮಠಗಳಿಗೆ ಪ್ರೌಢರನ್ನು ಬಾಲಸನ್ಯಾಸಿಗಳನ್ನು ನೇಮಕ ಮಾಡಬಹುದು ಎಂದಿದ್ದಾರೆ.
ಶಿರೂರು ಮಠದ ಲಕ್ಷ್ಮೀವರತೀರ್ಥ ಶ್ರೀಪಾದರ ಅಕಾಲಿಕ ನಿಧನದಿಂದ ತೆರವಾಗಿದ್ದ ಪೀಠಾಧಿಪತಿ ಸ್ಥಾನಕ್ಕೆ ಈಚೆಗೆ ದ್ವಂದ್ವ ಮಠವಾದ ಸೋದೆ ಮಠವು ವೇಧವರ್ಧನ ತೀರ್ಥರನ್ನು ನೇಮಿಸಿತ್ತು. ಬಾಲಸನ್ಯಾಸ ಹಾಗೂ ಧ್ವಂದ್ವ ಮಠಗಳ ಅಧಿಕಾರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿತ್ತು. ಸಲ್ಲಿಕೆಯಾಗಿದ್ದ ಅರ್ಜಿ ಇದೀಗ ವಜಾಗೊಂಡಿರುವುದು ಸ್ವಾಗತಾರ್ಹ ಎಂದು ಸೋದೆ ಮಠದ ವಕ್ತಾರ ರತ್ನಕುಮಾರ್ ತಿಳಿಸಿದ್ದಾರೆ.
ಸಭೆ ಕರೆದು ಮುಂದಿನ ನಿರ್ಧಾರ: ಲಾತವ್ಯ ಆಚಾರ್ಯ
ಶಿರೂರು ಮಠಕ್ಕೆ ಬಾಲಸನ್ಯಾಸಿಯ ನೇಮಕ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಲಾತವ್ಯ ಆಚಾರ್ಯ ಪ್ರತಿಕ್ರಿಯಿಸಿ, ಶೀಘ್ರವೇ ಶಿರೂರು ಮಠದ ಭಕ್ತ ಸಮಿತಿಯ ಸಭೆ ಕರೆದು ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

















