ಉಡುಪಿ: ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನವಾದ ಸೆ.17ರಿಂದ ಮೊದಲ್ಗೊಂಡು ಅವರು ಚುನಾಯಿತ ಸರಕಾರದ ನೇತೃತ್ವ ವಹಿಸಿ 20 ವರ್ಷಗಳನ್ನು ಪೂರೈಸುವ ದಿನವಾದ ಅ.7ರ ವರೆಗೆ ಜಿಲ್ಲಾ ಬಿಜೆಪಿಯಿಂದ ಉಡುಪಿ ಜಿಲ್ಲೆಯಾದ್ಯಂತ 20 ದಿನಗಳ ಪರ್ಯಂತ ನಡೆಯುವ ಸೇವೆ ಮತ್ತು ಸಮರ್ಪಣ ಅಭಿಯಾನವನ್ನು ಪಕ್ಷದ ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತ ಬಂಧುಗಳು ಸೇರಿ ಯಶಸ್ವಿಗೊಳಿಸೋಣ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಕರೆ ನೀಡಿದರು.
ಅವರು ಬಿಜೆಪಿ ಉಡುಪಿ ನಗರ ಮಂಡಲದ ಆಶ್ರಯದಲ್ಲಿ ಉಡುಪಿ ನಗರ ಕಚೇರಿಯಲ್ಲಿ ನಡೆದ ನಗರ ಮಂಡಲ ಪದಾಧಿಕಾರಿಗಳು ಮತ್ತು ಉಡುಪಿ ನಗರ ವ್ಯಾಪ್ತಿಯ ಮಹಾಶಕ್ತಿ ಕೇಂದ್ರಗಳ ಸಂಚಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕರ್ತರು ಮತ್ತು ತತ್ವ ಸಿದ್ಧಾಂತಗಳೇ ಬಿಜೆಪಿಯ ಜೀವಾಳ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಬೂತ್ ಸಶಕ್ತೀಕರಣ, ಬೂತ್ ಅಧ್ಯಕ್ಷರ ನಾಮ ಫಲಕ ಅಳವಡಿಕೆ ಅಭಿಯಾನಗಳು ನಡೆಯುತ್ತಿವೆ. ಪಕ್ಷದ ಎಲ್ಲಾ ಸಂಘಟನಾತ್ಮಕ ಹಾಗೂ ಸೇವಾ ಚಟುವಟಿಕೆಗಳು ಜಿಲ್ಲೆಯಿಂದ ಮಂಡಲಗಳ ಮೂಲಕ ಬೂತ್ ಮಟ್ಟದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುವಲ್ಲಿ ಮಹಾ ಶಕ್ತಿ ಕೇಂದ್ರಗಳು ಮತ್ತು ಶಕ್ತಿ ಕೇಂದ್ರಗಳ ಪಾತ್ರ ಮಹತ್ವಪೂರ್ಣವಾಗಿದೆ. ಈ ನೆಲೆಯಲ್ಲಿ ಸೇವೆ ಮತ್ತು ಸಮರ್ಪಣ ಅಭಿಯಾನವನ್ನು ಬೂತ್ ಮಟ್ಟಕ್ಕೆ ತಲುಪಿಸಿ, ಬದ್ಧತೆ ಮತ್ತು ಸಂಘಟಿತ ಪ್ರಯತ್ನದ ಮೂಲಕ ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸುವ ಜೊತೆಗೆ ಸದೃಢ ಪಕ್ಷ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮುಂಬರಲಿರುವ ಜಿ.ಪಂ., ತಾ.ಪಂ. ಚುನಾವಣೆಗೆ ಸಜ್ಜಾಗೋಣ ಎಂದು ಠಾಕೂರ್ ಹೇಳಿದರು.
ಬಿಜೆಪಿ ಜಿಲ್ಲಾ ಸಹ ವಕ್ತಾರ ಹಾಗೂ ಸೇವೆ ಮತ್ತು ಸಮರ್ಪಣ ಅಭಿಯಾನದ ಜಿಲ್ಲಾ ಸಂಚಾಲಕ ಶಿವಕುಮಾರ್ ಅಂಬಲಪಾಡಿ ಮಾತನಾಡಿ, ಸೇವೆ ಮತ್ತು ಸಮರ್ಪಣ ಅಭಿಯಾನದಡಿ 9 ವಿವಿಧ ವಿಭಾಗಗಳಲ್ಲಿ ಕೈಗೊಳ್ಳಬೇಕಾದ ಸೇವಾ ಕಾರ್ಯಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಸಭೆಯಲ್ಲಿ ಸೇವೆ ಮತ್ತು ಸಮರ್ಪಣ ಅಭಿಯಾನದ ಅಂಗವಾಗಿ ಬಿಜೆಪಿ ಉಡುಪಿ ನಗರ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗುವ ವಿಶೇಷ ಸೇವಾ ಕಾರ್ಯಕ್ರಮಗಳ ಬಗ್ಗೆ ಯೋಜನೆಗಳನ್ನು ಸಿದ್ದಪಡಿಸಲಾಯಿತು.
ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ್ ನಾಯಕ್, ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್ ಮತ್ತು ದಿನೇಶ್ ಅಮೀನ್ ಹಾಗೂ ಬಿಜೆಪಿ ಉಡುಪಿ ನಗರ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರಗಳ ಸಂಚಾಲಕರು ಉಪಸ್ಥಿತರಿದ್ದರು.