ಬೆಂಗಳೂರು: ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಘಟಕದ ವತಿಯಿಂದ ರಾಜ್ಯದ ಬಿಜೆಪಿ ಸರಕಾರದಲ್ಲಿ ಒಬಿಸಿ ಸಮುದಾಯದಿಂದ ಸಚಿವರಾದ ಜನಪ್ರತಿನಿಧಿಗಳನ್ನು ನಗರದ ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸೆ. 22ರಂದು ಸಂಜೆ 6 ಗಂಟೆಗೆ ಸನ್ಮಾನಿಸಲಾಗುವುದು ಎಂದು ಬಿಜೆಪಿ ಒ.ಬಿ.ಸಿ. ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಯಶ್‌ಪಾಲ್ ಎ. ಸುವರ್ಣ ಮತ್ತು ಒ.ಬಿ.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ನೆ.ಲ. ನರೇಂದ್ರಬಾಬು ಅವರು ತಿಳಿಸಿದ್ದಾರೆ.
ರಾಜ್ಯದ ಸಚಿವರಾದ ಕೆ.ಎಸ್.ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಶ್ರೀ ಸುನೀಲ್ ಕುಮಾರ್, ಎಂ.ಟಿ.ಬಿ.ನಾಗರಾಜ್, ಭೈರತಿ ಬಸವರಾಜ್, ಶ್ರೀ ಮುನಿರತ್ನ ಮತ್ತು ಆನಂದ್ ಸಿಂಗ್ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಅಲ್ಲದೆ, ಒಬಿಸಿ ಸಮುದಾಯದ ಶಾಸಕರಿಗೆ ಗೌರವಾರ್ಪಣೆಯೂ ನೆರವೇರಲಿದೆ ಎಂದು ಅವರು ತಿಳಿಸಿದ್ದಾರೆ.
ಸಂಸದರಾದ ಪಿ.ಸಿ. ಮೋಹನ್ ಮತ್ತು ನಾರಾಯಣ್ ಅವರನ್ನೂ ಗೌರವಿಸಲಾಗುವುದು. ಕಾರ್ಯಕರ್ತರ ಜೊತೆ ಭೇಟಿಗೆ ಇದೊಂದು ಅವಕಾಶ ಎಂದು ತಿಳಿಸಿದ್ದು, ನೀಟ್ ಪರೀಕ್ಷೆಯಲ್ಲಿ ಒಬಿಸಿ ಸಮುದಾಯಕ್ಕೆ ಶೇ 27ರಷ್ಟು ಅವಕಾಶ ನೀಡಿದ ಜನಪರ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಕ್ರಮವನ್ನು ಸ್ವಾಗತಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಸಂಪುಟಕ್ಕೆ ಒಬಿಸಿ ಸಮುದಾಯದ 27 ಜನರನ್ನು ಸೇರ್ಪಡೆಗೊಳಿಸಿದ್ದನ್ನು ಮೋರ್ಚಾ ಸ್ವಾಗತಿಸುತ್ತದೆ. ಇಂಥ ಕ್ರಮಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಮುಖ್ಯಮಂತ್ರಿಗಳು ಏಳು ಜನ ಹಿಂದುಳಿದ ಸಮಾಜದ ಸಚಿವರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಮೋರ್ಚಾ ವತಿಯಿಂದ ಮುಖ್ಯಮಂತ್ರಿಗಳಿಗೂ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸುವುದಾಗಿ ತಿಳಿಸಿದ್ದಾರೆ.
ಸೆ.22ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಒ.ಬಿ.ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ್, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದರಾದ ನಳಿನ್ ಕುಮಾರ್ ಕಟೀಲ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ ರವಿ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದರಾದ ಡಿ. ವಿ. ಸದಾನಂದ ಗೌಡ, ಸಚಿವರು ಮತ್ತು ಸ್ಥಳೀಯ ಶಾಸಕರಾದ ಡಾ. ಸಿ.ಎನ್ ಅಶ್ವತ್ಥನಾರಾಯಣ್, ಕೇಂದ್ರ ಲೋಕಸಭಾ ಸದಸ್ಯ ಪಿ.ಸಿ ಮೋಹನ್ ಅವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಸಂಸದರು, ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಚುನಾವಣಾ ಪ್ರತಿನಿಧಿಗಳು ಮತ್ತು ಒಬಿಸಿ ಸಮುದಾಯಗಳ ಮುಖಂಡರು, ಒ.ಬಿ.ಸಿ ಮೋರ್ಚಾ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.












