ಉಡುಪಿ: ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವ ಸಮಿತಿಯ ಹಾಗೂ ಪರ್ಯಾಯ ಕಚೇರಿಯ ಉದ್ಘಾಟನಾ ಸಮಾರಂಭವು ಕೃಷ್ಣಾಪುರ ಮಠದ ಶ್ರೀಕೃಷ್ಣಸಭಾ ಮಂದಿರದಲ್ಲಿ ನಡೆಯಿತು.
ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘಾಟಿಸಿ ಮಾತನಾಡಿ, ಪರ್ಯಾಯೋತ್ಸವವು ಪ್ರತಿ ಬಾರಿ ನಡೆಯುವಂತೆ ತಯಾರಿ ನಡೆಸಿ ಆ ಸಮಯದಲ್ಲಿ ಕೋವಿಡ್ ನಿಯಮಾನುಸಾರ ನಡೆಸಲಾಗುವುದು. ನಾವು ಮಾಡುವ ಉತ್ತಮ ಕಾರ್ಯವು ದೇವರ ಚಿತ್ತಕ್ಕೆ ಬಂದು ದೇಶಕ್ಕೆ ಕಲ್ಯಾಣವಾಗಲಿ ಎಂದರು.
ನಮ್ಮ ಪರ್ಯಾಯವಾಗಿರದೆ ಗುರುಗಳಾದ ಮಧ್ವಾಚಾರ್ಯರ, ಭಾವೀ ಸಮೀರರಾದ ವಾದಿರಾಜರು ನಮ್ಮೊಳಗಿದ್ದು ಮಾಡುವ ಪರ್ಯಾಯದಿಂದ ಪ್ರಪಂಚಕ್ಕೆ ಮಂಗಳವಾಗಲಿ. ನಮ್ಮ ಮಠದ ಅಭಿಮಾನದ ಮೇರೆಗೆ ಆಗಮಿಸಿ ಜವಾಬ್ದಾರಿ ವಹಿಸಿಕೊಂಡು ಪರ್ಯಾಯಯೋತ್ಸವವು ಯಶಸ್ವಿಯಾಗುವಲ್ಲಿ ಸಹಕರಿಸುವ ತಮಗೆಲ್ಲರಿಗೂ ಶ್ರೀಕೃಷ್ಣ ಮುಖ್ಯಪ್ರಾಣ ದೇವರು ಶ್ರೇಯಸ್ಸನ್ನುಂಟುಮಾಡಲಿ ಎಂದು ಶುಭಹಾರೈಸಿದರು.
ಸಮಿತಿಯ ಕಾರ್ಯಾಧ್ಯಕ್ಷ ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಶ್ರೀಪಾದರ ಆದೇಶದ ಮೇರೆಗೆ ಕೋವಿಡ್ ನಿಯಮಾನುಸಾರ ಪರ್ಯಾಯೋತ್ಸವದ ರೂಪುರೇಷೆಯನ್ನು ತಯಾರಿಸಿ ಉಡುಪಿ ನಗರದ ಅಭಿವೃದ್ಧಿಗೆ ಸರಕಾರದಿಂದ ಗರಿಷ್ಠ ಅನುದಾನವನ್ನು ತರಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮೆರವಣಿಗೆಗೆ ಬೇಕಾದ ವಿಶೇಷ ಜಾನಪದ ತಂಡಗಳು ಭಾಗವಹಿಸುವಂತೆ ಕರೆಸಲಾಗುವುದು. ಸರ್ಕಾರದ ವತಿಯಿಂದ ಸರ್ವಸಹಕಾರವನ್ನು ನೀಡಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಕಟೀಲು ಅರ್ಚಕರಾದ ವಾಸುದೇವ ಅಸ್ರಣ್ಣ, ಲಕ್ಷ್ಮೀನಾರಾಯಣ ಅಸ್ರಣ್ಣ, ಅನಂತ ಅಸ್ರಣ್ಣ, ಮಾಜಿ ಸಚಿವರುಗಳಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಕಾ.ಸಾ.ಪ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಹಾಗೂ ಪ್ರದೀಪ್ ಕಲ್ಕೂರ್, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಮಂಜುನಾಥ ಉಪಾಧ್ಯಾಯ, ಅಷ್ಟಮಠದ ದಿವಾನರುಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಪರ್ಯಾಯ ಸಮಿತಿಯ ಅಧ್ಯಕ್ಷರಾದ ಸೂರ್ಯನಾರಾಯಣ ಉಪಾಧ್ಯಾಯರು ಸ್ವಾಗತಿಸಿದರು. ಕಾರ್ಯದರ್ಶಿಗಳಾದ ವಿಷ್ಣುಪ್ರಸಾದ್ ಪಾಡಿಗಾರು ಕಾರ್ಯಕಾರಿ ಸದಸ್ಯರ ವಿವರವನ್ನು ನೀಡಿ, ಸಮಿತಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ವಿ.ಲಕ್ಷ್ಮೀನಾರಾಯಣ ಇವರು ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಸಂಯೋಜಕರಾಗಿ ಯು.ಕೆ.ರಾಘವೇಂದ್ರ ರಾವ್ ಧನ್ಯವಾದ ನೀಡಿದರು.












