ನವದೆಹಲಿ: ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಅವರು ಇಂದು (ಶನಿವಾರ) ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ (ಟಿಎಂಸಿ) ಸೇರ್ಪಡೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅವರು ಕೆಲವೇ ದಿನಗಳ ಹಿಂದಷ್ಟೇ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದರು. ಆದಾಗ್ಯೂ ಅವರು ಸಂಸದ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿರಲಿಲ್ಲ.
ಟಿಎಂಸಿಯ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸುತ್ತಿದ್ದವರಲ್ಲಿ ಪ್ರಮುಖರಾಗಿದ್ದ ಬಾಬುಲ್, ಜುಲೈನಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ್ದರು ಮತ್ತು ಮುಂದೆ ಯಾವುದೇ ಪಕ್ಷವನ್ನು ಸೇರುವುದಿಲ್ಲ ಎಂದು ತಿಳಿಸಿದ್ದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ 2014ರಿಂದಲೂ ಹಲವು ಖಾತೆಗಳನ್ನು ನಿರ್ವಹಿಸಿದ್ದ ಸುಪ್ರಿಯೋ ಅವರನ್ನು ಜುಲೈ ತಿಂಗಳ ಆರಂಭದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಪುನರ್ರಚನೆ ವೇಳೆ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿತ್ತು.
ಅದಾದ ಕೆಲವೇ ದಿನಗಳ ನಂತರ ಅವರು ರಾಜಕೀಯ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು.












