ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಉಡುಪಿ ನಗರಸಭೆಯ ವಿಪಕ್ಷ ನಾಯಕ ರಮೇಶ್ ಕಾಂಚನ್ ಅವರು ನೇಮಕಗೊಂಡಿದ್ದಾರೆ.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಶಿಫಾರಸಿನ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಮೇಶ್ ಕಾಂಚನ್ ಅವರನ್ನು ಈ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಆದೇಶದ ಪ್ರತಿಯನ್ನು ಶನಿವಾರ ರಮೇಶ್ ಕಾಂಚನ್ ಅವರಿಗೆ ಹಸ್ತಾಂತರಿಸಿದರು.
ರಮೇಶ್ ಕಾಂಚನ್ ಅವರು ಒಂದು ಅವಧಿಗೆ ಉಡುಪಿ ತಾ.ಪಂ. ಸದಸ್ಯರಾಗಿ, ಎರಡು ಅವಧಿಗೆ ಉಡುಪಿ ನಗರಸಭಾ ಸದಸ್ಯರಾಗಿ, ಪ್ರಸಕ್ತ ನಗರಸಭೆಯ ವಿರೋಧ ಪಕ್ಷದ ನಾಯಕರಾಗಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಉತ್ತಮ ಸಂಘಟಕರಾಗಿ ಹೆಸರು ಮಾಡಿರುವ ಕಾಂಚನ್ ಅವರು ಮೊಗವೀರ ಸಂಘಟನೆಯ ಜಿಲ್ಲಾ ಘಟಕದ ಸ್ಥಾಪಕ ಉಪಾಧ್ಯಕ್ಷರಾಗಿ, ಮಣಿಪಾಲ ರಿಕ್ಷಾ ಚಾಲಕ-ಮಾಲಕರ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಶೀರೂರು ಮಠ ಹಾಗೂ ಪುತ್ತಿಗೆ ಮಠಗಳ ಪರ್ಯಾಯದಲ್ಲಿ ಹಿರಿಯಡ್ಕ ವಿಭಾಗದ ಹೊರೆ ಕಾಣಿಕೆ ಸಮಿತಿಯ ಅಧ್ಯಕ್ಷರಾಗಿ, ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ ಕೂಟದ ಆರ್ಥಿಕ ಸಮಿತಿಯ ಅಧ್ಯಕ್ಷರಾಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿಯ ಮಾದಕ ವ್ಯಸನ ವಿಮೋಚನಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.