ಉಡುಪಿ: ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಅಮೃತ ಯೋಜನೆ ಹಾಗೂ ಕೋವಿಡ್ ನಿರ್ವಹಣೆ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು.
ಕೋವಿಡ್ ಸೋಂಕಿತರು, ಲಸಿಕೆ ವಿತರಣೆ, ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ಪ್ರಗತಿ ಮತ್ತಿತರ ವಿಷಯಗಳ ಬಗ್ಗೆ ವಿವರವಾದ ಚರ್ಚೆ ನಡೆಸಲಾಯಿತು. ಆಕ್ಸಿಜನ್ ಪ್ಲಾಂಟ್ ಹಾಗೂ ಐಸಿಯು ನಿರ್ಮಾಣ ವಿಳಂಬವಾಗಿರುವುದಕ್ಕೆ ಅಸಮಾಧಾನ ಸೂಚಿಸಿದ ಸಚಿವರು ತ್ವರಿತವಾಗಿ ಕೆಲಸ ಪೂರ್ಣಗೊಳಿಸಲು ಸೂಚಿಸಿದರು. ಸಂಪೂರ್ಣ ಲಸಿಕೀಕರಣ ಕೈಗೊಂಡ ಕುಂದಾಪುರ ತಾಲೂಕಿನ 2 ಗ್ರಾಮ ಪಂಚಾಯಿತಿಗಳಿಗೆ ಸಚಿವರು ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಉಡುಪಿ ಶಾಸಕರಾದ ಕೆ. ರಘುಪತಿ ಭಟ್, ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿಗಳಾದ ಕೂರ್ಮ ರಾವ್ ಎಂ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ನವೀನ್ ಭಟ್ ವೈ., ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು, ಆರೋಗ್ಯ ಇಲಾಖೆಯ ಹಾಗೂ ಇತರೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.