ಎಲ್ಐಸಿ ಉಡುಪಿ ವಿಭಾಗದ 65ನೇ ವಿಮಾ ಸಪ್ತಾಹದ ಉದ್ಘಾಟನೆ

ಉಡುಪಿ: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ದ ಉಡುಪಿ ವಿಭಾಗೀಯ ಕಚೇರಿಯಲ್ಲಿ 65ನೇ ವಿಮಾ ಸಪ್ತಾಹದ ಉದ್ಘಾಟನಾ ಸಮಾರಂಭ ಬುಧವಾರ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಬಿಂದು ರಾಬರ್ಟ್ ಮಾತನಾಡಿ, ಕ್ಲೈಮ್ ಸೆಟ್ಲ್‌ಮೆಂಟ್‌ನಲ್ಲಿ ಮಂಚೂಣಿಯಲ್ಲಿರುವ ನಿಗಮವು, ಕೋವಿಡ್ ಸಮಯದಲ್ಲಿಯೂ ತನ್ನ ಹಿರಿತನವನ್ನು ಉಳಿಸಿಕೊಂಡಿದೆ. ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳುವುದರಲ್ಲಿ ಅಗ್ರಗಣ್ಯನೆಂದೆನಿಸಿಕೊಂಡಿರುವ ನಿಗಮವು, ಪಾಲಿಸಿದಾರರಿಗೆ ಹಾಗೂ ಪ್ರತಿನಿಧಿಗಳಿಗೆ ಅನುಕೂಲವಾಗಿರುವ ಆನಂದ್ ಆ್ಯಪ್‌ಅನ್ನು ಅಭಿವೃದ್ಧಿ ಪಡಿಸಿ ಅಳವಡಿಸಿಕೊಂಡಿರುವುದು ಈ ವರ್ಷದ ಹೆಗ್ಗಳಿಕೆಗಳಲ್ಲೊಂದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಎಲ್‌ಐಸಿ ಧ್ವಜಾರೋಹಣವನ್ನು ನೆರವೇರಿಸಲಾಯಿತು. ವಿಮಾ ಸಪ್ತಾಹದ ಅಂಗವಾಗಿ ಉಡುಪಿ ವಿಭಾಗದ ವತಿಯಿಂದ ಜಿಲ್ಲಾಸ್ಪತ್ರೆಗೆ ವಾಟರ್‌ಹೀಟರ್, ನಗರಸಭೆ ಸ್ವಚ್ಛತಾ ಕಾರ್ಯಕರ್ತರಿಗೆ ಮಾಸ್ಕ್ ಹಾಗೂ ಕೈಗವುನುಗಳ, ಆಯುಷ್ ಆಸ್ಪತ್ರೆಗೆ ಪೀಠೋಪಕರಣಗಳ ಕೊಡುಗೆಯನ್ನು ನೀಡಲಾಯಿತು.

ಸ್ವಾತಂತ್ರ ಅಮೃತ ಮಹೋತ್ಸವದ ನೆನಪಿನಲ್ಲಿ 75ವರ್ಷಕ್ಕೂ ಮೇಲ್ಪಟ್ಟ ಪಾಲಿಸಿದಾರರಾದ ಶ್ರೀಶ ಆಚಾರ್ಯ ಹಾಗೂ ಕೇಶವ ಕಲ್ಕೂರ ಅವರನ್ನು ಸನ್ಮಾನಿಸಲಾಯಿತು. ಮಾರುಕಟ್ಟೆ ಪ್ರಬಂಧಕ ಎನ್.ರಮೇಶ್ ಭಟ್ ಸ್ವಾಗತಿಸಿದರು. ವಿಕ್ರಯ ಪ್ರಬಂಧಕ ಕೆ.ಸದಾಶಿವ ಕಾರ್ಯಕ್ರಮ ನಿರೂಪಿಸಿದರು.