ಸಾಸ್ತಾನ: ವಿಜಯನಗರ ದೊರೆ ಇಮ್ಮಡಿ ದೇವರಾಯನ ಶಾಸನ ಪತ್ತೆ

ಸಾಸ್ತಾನ: ಸಾಸ್ತಾನದ ಪಾಂಡೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಂಕಬೆಟ್ಟು ಪ್ರದೇಶದ ಶ್ರೀನಿವಾಸ ಭಟ್ ಅವರ ಮನೆಯ ಹಿಂಭಾಗದ ಬಾವಿಯ ಸಮೀಪದಲ್ಲಿ 14 ನೇ ಶತಮಾನದ ಶಾಸನವನ್ನು ಇತಿಹಾಸ‌ ಮತ್ತು ಪುರಾತತ್ವ ವಿದ್ವಾಂಸರಾದ ಡಾ. ಎಸ್.ಜಿ. ಸಾಮಕ್ ಅವರು ಪತ್ತೆ ಮಾಡಿದ್ದು, ಇದನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ.

ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು 180 ಸೆಂ.ಮೀ ಎತ್ತರ 60 ಸೆಂ.ಮೀ ಅಗಲವಿದೆ. ಶಾಸನದ ಮೇಲ್ಬಾಗದಲ್ಲಿ ಬ್ರಾಹ್ಮಣ ವಟು ಹಾಗೂ ಇಕ್ಕೆಲಗಳಲ್ಲಿ ಸೂರ್ಯ-ಚಂದ್ರ ಮತ್ತು ಶಂಖ-ಚಕ್ರದ ಉಬ್ಬು ಕೆತ್ತನೆಯಿದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನವನ್ನು ಬಾವಿಯ ಹಾಸುಗಲ್ಲಾಗಿ ಬಳಸಿಕೊಂಡಿರುವುದರಿಂದ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು, ಶಾಸನದಲ್ಲಿ ಶಕವರುಷ 1355 (ಕ್ರಿ.ಶ 1433) ನೇ ಪ್ರಮಾದಿ (ಪ್ರಮಾದ) ನಾಮ ಸಂವತ್ಸರದ ಉಲ್ಲೇಖವಿದೆ.

ವಿಜಯನಗರವನ್ನು ಶ್ರೀ ವೀರ ಪ್ರತಾಪ ದೇವರಾಯ ಆಳ್ವಿಕೆ ಮಾಡುತ್ತಿರುವ ಕಾಲದಲ್ಲಿ ಬಾರಕೂರನ್ನು ಅಂಣಪ್ಪ ಒಡೆಯ ಪ್ರತಿಪಾಲಿಸುತ್ತಿರುವಾಗ ಬ್ರಾಹ್ಮಣರಿಗೆ ದಾನವನ್ನು ನೀಡಿರುವ ಮಾಹಿತಿಯನ್ನು ‌ಈ ಶಾಸನವು ತಿಳಿಸುತ್ತದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯದ ಕೆಲವೊಂದು ಪದಗಳು ತಿಳಿಯುತ್ತದೆ.