ಉಡುಪಿ: ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ರಾಜ್ಯಮಟ್ಟದ ಹಿರಿಯರ ಮತ್ತು ಕಿರಿಯರ 23ರ ವಯೋಮಿತಿಯ ಪುರುಷ ಮತ್ತು ಮಹಿಳೆಯರ ಅಥ್ಲೆಟಿಕ್ ಚಾಂಪಿಯನ್ಶಿಪ್ ಸೆ.4 ಮತ್ತು 5ರಂದು ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಕುರಿತು ಕ್ರೀಡಾ ಕೂಟದ ಸಂಘಟನ ಸಮಿತಿ ಅಧ್ಯಕ್ಷ, ಶಾಸಕ ಕೆ.ರಘುಪತಿ ಭಟ್ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಕ್ರೀಡಾ ಇಲಾಖೆ, ಮಾಹೆ, ನಿಟ್ಟೆ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಈ ಕ್ರೀಡಾಕೂಟ ನಡೆಯಲಿದ್ದು, ಸುಮಾರು 400 ಮಂದಿ ಕ್ರೀಡಾಪಟುಗಳು, 75 ಮಂದಿ ಅಧಿಕಾರಿಗಳು, 50 ಮಂದಿ ಸ್ವಯಂ ಸೇವಕರು ಪಾಲ್ಗೊಳ್ಳಲಿದ್ದಾರೆ. ಒಟ್ಟು 80 ಸ್ಪರ್ಧೆಗಳು ನಡೆಯಲಿವೆ ಎಂದರು.
ಸೆ.4ರಂದು ಬೆಳಗ್ಗೆ 10.30ಕ್ಕೆ ಕ್ರೀಡಾ ಇಲಾಖೆ ಸಚಿವ ನಾರಾಯಣ ಗೌಡ ಕ್ರೀಡಾಕೂಟ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್, ಮಣಿಪಾಲ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಭಾಗವಹಿಸಲಿದ್ದಾರೆ.
ಸೆ.5ರಂದು ಸಂಜೆ 4.30ಕ್ಕೆ ಸಮಾರೋಪ ನಡೆಯಲಿದೆ. ರಾಜ್ಯ ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜತೆಗೆ ಸೆ.25ರಿಂದ 29ರ ವರೆಗೆ ಚೆನ್ನೈಯಲ್ಲಿ ನಡೆಯುವ 23ರ ವಯೋಮಿತಿಯ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕರ್ನಾಟಕ ತಂಡದ ಆಯ್ಕೆ ನಡೆಯಲಿದೆ. ಸೆ.15ರಿಂದ 19ರವರೆಗೆ ವಾರಂಗಲ್ನಲ್ಲಿ ನಡೆಯುವ 60ನೇ ರಾಷ್ಟ್ರೀಯ ಹಿರಿಯರ ಆತ್ಲೆಟಿಕ್ ಕ್ರೀಡಾಕೂಟಕ್ಕೆ ಕರ್ನಾಟಕ ತಂಡದ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷ ಡಾ. ಕೆಂಪರಾಜ್ ಎಚ್.ಬಿ., ರಾಜ್ಯ ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ಎ.ರಾಜವೇಲು, ರಾಜ್ಯ ಹಿರಿಯರ ಮತ್ತು 23ರ ವಯೋಮಿತಿ ಕ್ರೀಡಾಕೂಟದ ಸಂಘಟನ ಕಾರ್ಯದರ್ಶಿ ಮಹೇಶ್ ಠಾಕೂರ್, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಗೌರವ ಸಲಹೆಗಾರ ಅಶೋಕ್ ಅಡ್ಯಂತಾಯ, ಕಾರ್ಯದರ್ಶಿ ದಿನೇಶ್ ಕುಮಾರ್, ಖಜಾಂಚಿ ಡಾ.ದೀಪಕ್ ರಾಮ್ ಬಾಯರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾರಾಯಣ ದೇವಾಡಿಗ ಉಪಸ್ಥಿತರಿದ್ದರು.