ಉಡುಪಿ: ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ಕೃಷಿಯಲ್ಲಿ ತೊಡಗಿಕೊಂಡು ಬೇಸಾಯ ಮಾಡಬೇಕು ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ನಡೆಯುತ್ತಿರುವ ಹಡಿಲು ಭೂಮಿ ಕೃಷಿ ಆಂದೋಲದಡಿ ನಾಟಿ ಮಾಡಿರುವ ಗದ್ದೆಯಲ್ಲಿ ಬೆಳೆದ ಕಳೆ ತೆಗೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷಿ ಅಂತರ್ಜಲವನ್ನು ವೃದ್ಧಿಸುತ್ತದೆ. ಹಾಗಾಗಿ ಕೃಷಿ ಭೂಮಿಯನ್ನು ಹಡಿಲು ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಆಂದೋಲನದಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಸಂದೀಪ್ ಕುಮಾರ್ ಕೂಡ ಕಳೆ ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಂಡರು. ರಿಷಬ್ ಶೆಟ್ಟಿ ಒಂದು ಗಂಟೆ ಗದ್ದೆಯಲ್ಲಿ ಕಳೆಗಳನ್ನು ಕಿತ್ತರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಕಲ್ಯಾಣಪುರ ಗ್ರಾ.ಪಂ. ಅಧ್ಯಕ್ಷ ಕೃಷ್ಣ ದೇವಾಡಿಗ, ಕೇದಾರೋತ್ಥಾನ ಟ್ರಸ್ಟ್ನ ಕೋಶಾಕಾರಿ ರಾಘವೇಂದ್ರ ಕಿಣಿ ಮೊದಲಾದವರು ಇದ್ದರು.