ಉಡುಪಿ: ಖಾಸಗಿ ಆಸ್ಪತ್ರೆಗಳು ಕೋವಿಡ್ ಲಕ್ಷಣಗಳನ್ನು ಹೊಂದಿರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು; ಡಿಸಿ ಜಗದೀಶ್ ಸೂಚನೆ

ಉಡುಪಿ: ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಜ್ವರ, ಶೀತ, ಕೆಮ್ಮು ಲಕ್ಷಣಗಳನ್ನು ಹೊಂದಿರುವವರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ ಪರೀಕ್ಷೆಯನ್ನು ಹೆಚ್ಚುಗೊಳಿಸಲಾಗಿದ್ದು, ಸ್ವಾಬ್ ಸಂಗ್ರಹಿಸಿದ 24 ಗಂಟೆಯೊಳಗೆ ವರದಿ ನೀಡಲು ಕ್ರಮಕೈಗೊಳ್ಳಬೇಕು. ಲ್ಯಾಬ್ ನಲ್ಲಿ ಪರೀಕ್ಷಾ ವರದಿ ನೀಡಲು ವಿಳಂಬವಾದಲ್ಲಿ, ಪಕ್ಕದ ಜಿಲ್ಲೆಗಳಿಗೆ ಸ್ವಾಬ್ ಕಳುಹಿಸಿ ನಿಗದಿತ ಅವಧಿಯೊಳಗೆ ವರದಿ ಪಡೆಯುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರ ಪ್ರದೇಶದಲ್ಲಿ ಪಾಸಿಟಿವ್ ಬಂದ ವ್ಯಕ್ತಿಯು ವಾಸಿಸುವ 100ಮೀ ಪ್ರದೇಶದಲ್ಲಿ ಹಾಗೂ ಗ್ರಾಮೀಣ ಪ್ರದೇಶದ 200 ಮೀ ವ್ಯಾಪ್ತಿಯಲ್ಲಿ ವ್ಯಾಪಕ ಟೆಸ್ಟಿಂಗ್ ಗಳನ್ನು ನಡೆಸಿ, ಹಾಗೆ ಉದ್ಯೋಗಿಗಳು ಪಾಸಿಟಿವ್ ಬಂದಲ್ಲಿ ಅವರೊಂದಿಗೆ ಕಾರ್ಯನಿರ್ವಹಿಸುವ ಎಲ್ಲಾ ಸಹದ್ಯೋಗಿಗಳನ್ನು ಪರೀಕ್ಷೆಗೆ ಒಳಪಡಿಸಿ ಎಂದು ಸೂಚಿಸಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಜಿಲ್ಲಾ ಪರಿಣಿತರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಜಿಲ್ಲೆಯಲ್ಲಿ ಆಕ್ಸಿಜಿನ್ ಪ್ಲಾಂಟ್ ನಿರ್ಮಾಣ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಅದಷ್ಟು ಶೀಘ್ರದಲ್ಲಿ ಜಿಲ್ಲೆಗೆ ಮಂಜೂರಾಗಿರುವ ಎಲ್ಲಾ ಪ್ಲಾಂಟ್ ಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಕಾರ್ಯನಿರ್ವಹಿಸುವ ಕುರಿತಂತೆ ಸಂಬಂಧಪಟ್ಟ ಕಂಪೆನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ತಿಳಿಸಿದರು.

ಮಕ್ಕಳ ವಾರ್ಡ್ ನಿರ್ಮಾಣ ಕುರಿತಂತೆ ಎಲ್ಲಾ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಿ, ಸರ್ಕಾರ ಮತ್ತು ವಿವಿಧ ದಾನಿಗಳು ನೀಡಿರುವ ವೈದ್ಯಕೀಯ ಉಪಕರಣಗಳನ್ನು ವಾರ್ಡ್ ನಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಗೆ ಕೇರಳ ಸಮೀಪದ್ದಲ್ಲಿದ್ದು, ಅಲ್ಲಿಂದ ವಿವಿಧ ಕಾರಣಗಳಿಗೆ ಸಾರ್ವಜನಿಕರು ಆಗಮಿಸುತ್ತಿರುವ ಕಾರಣ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿಲ್ಲ. ಜಿಲ್ಲೆಗೆ ವಿದ್ಯಾಭ್ಯಾಸಕ್ಕೆ ಆಗಮಿಸುವ ಹೊರರಾಜ್ಯದ ವಿದ್ಯಾರ್ಥಿಗಳನ್ನು 7 ದಿನಗಳ ಐಸೊಲೇಶನ್ ಗೆ ಒಳಪಡಿಸಿ, 7 ನೇ ದಿನ ಅವರಿಗೆ ಕೋವಿಡ್ ಪರೀಕ್ಷೆ ನಡೆಸಿ ಎಂದು ಡಿಸಿ ಹೇಳಿದರು.