ಮಣಿಪಾಲ: ಕರಾವಳಿ ಕರ್ನಾಟಕದ ಮೊಟ್ಟಮೊದಲ ಸ್ಕಿನ್ ಬ್ಯಾಂಕ್ (ಚರ್ಮ ನಿಧಿ)
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಇಂದು ಉದ್ಘಾಟನೆಗೊಂಡಿತು.
ರೋಟರಿ ಕ್ಲಬ್ ಮಣಿಪಾಲ ಟೌನ್ ಮತ್ತು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಪಾಲುದಾರಿಕೆಯಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ “ರೋಟರಿ ಮಾಹೆ ಸ್ಕಿನ್ ಬ್ಯಾಂಕ್’ ” ಅನ್ನು ಸ್ಥಾಪಿಸಲಾಗಿದೆ.
ರೋಟರಿ ಕ್ಲಬ್ ಮಣಿಪಾಲ್ ಟೌನ್ ಉಪಕರಣಗಳನ್ನು ಖರೀದಿಸಲು ರೋಟರಿ ಫೌಂಡೇಶನ್ನ ಜಾಗತಿಕ ಅನುದಾನ ಕಾರ್ಯಕ್ರಮದಡಿ 83 ಲಕ್ಷ ರೂಪಾಯಿಗಳನ್ನು ನೀಡಿತ್ತು. ಹಾಗೆ ಅವಶ್ಯಕ ಮೂಲಸೌಕರ್ಯಗಳಿಗೆ ಮಾಹೆ 50 ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡಿದೆ.
ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಧ್ಯಕ್ಷ ಡಾ.ರಂಜನ್ ಆರ್ ಪೈ ಸ್ಕಿನ್ ಬ್ಯಾಂಕ್ ಅನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈ ಸ್ಕಿನ್ ಬ್ಯಾಂಕ್ ನಿಂದ ಈ ಪ್ರದೇಶದ ಸುಟ್ಟ ಗಾಯಗಳ ಸಂತ್ರಸ್ತರಿಗೆ, ಬಡಜನರಿಗೆ ಸಹಾಯವಾಗಲಿದೆ. ಸ್ಕಿನ್ ಬ್ಯಾಂಕ್ನಲ್ಲಿ ಸುಲಭವಾಗಿ ಲಭ್ಯವಿರುವ ಚರ್ಮವನ್ನು ಬಳಸಿಕೊಂಡು ಸ್ಕಿನ್ ಗ್ರಾಫ್ಟಿಂಗ್ ಮಾಡುವ ಮೂಲಕ, ರೋಗಿಗಳಿಗೆ ಉತ್ತಮ ಆರೈಕೆ ಸಿಗಲಿದೆ. ಅವರ ಜೀವನದ ಗುಣಮಟ್ಟ ಮತ್ತು ಆತ್ಮವಿಶ್ವಾಸ ಹೆಚ್ಚಲಿದೆ. ಅತ್ಯಾಧುನಿಕ ಮತ್ತು ಗುಣಮಟ್ಟದ ವೈದ್ಯಕೀಯ ಆರೈಕೆ ನೀಡುವಲ್ಲಿ ಮಾಹೆ ಯಾವಾಗಲೂ ಮುಂಚೂಣಿಯಲ್ಲಿದೆ. ಈ ಸ್ಕಿನ್ ಬ್ಯಾಂಕ್ನೊಂದಿಗೆ, ಮಾಹೆ ವೈದ್ಯರು ಸುಟ್ಟ ಸಂತ್ರಸ್ತರಿಗೆ ಚಿಕಿತ್ಸೆ ನೀಡುವಲ್ಲಿ ತಮ್ಮ ಚಾಣಾಕ್ಷ ಕೌಶಲ್ಯಗಳೊಂದಿಗೆ ಗುಣಪಟ್ಟದ ಸೇವೆ ನೀಡಲಿದ್ದಾರೆ. ಇದನ್ನು ಸಾಧ್ಯವಾಗಿಸಿದ ರೋಟರಿ ಮತ್ತು ಮಾಹೆ ತಂಡವನ್ನು ನಾನು ಅಭಿನಂದಿಸುತ್ತೇನೆ ಎಂದರು.
ಮಣಿಪಾಲ ಕೆಎಂಸಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ ಎನ್.ಸಿ ಶ್ರೀಕುಮಾರ್ ಮಾತನಾಡಿ, ರೋಗಿಗಳು ಶೇ. 30-40 ಕ್ಕಿಂತ ಹೆಚ್ಚು ಗಾಯಗೊಂಡರೆ ಅವರಿಗೆ ತಮ್ಮ ಚರ್ಮವನ್ನು ಬಳಸಿಕೊಳ್ಳಲು ಆಗುವುದಿಲ್ಲ. ಹಲವಾರು ದುಬಾರಿ ದರದ ಬದಲಿ ಚರ್ಮಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಮೃತ ಮಾನವರ ಚರ್ಮವು ಅತ್ಯುತ್ತಮ ಬದಲಿ ಚರ್ಮವಾಗಿದೆ. ಕಸ್ತೂರ್ಬಾ ಆಸ್ಪತ್ರೆಯಲ್ಲಿ ಈಗ ಸ್ಕಿನ್ ಬ್ಯಾಂಕ್ ಆರಂಭವಾಗುತ್ತಿರುವುದರಿಂದ ಸುಟ್ಟ ಗಾಯದ ರೋಗಿಗಳು ಭಾರತದ ಇತರ ಭಾಗಗಳಿಂದ ಚರ್ಮವನ್ನು ಪಡೆಯಲು ನಿರ್ಣಾಯಕ ಅವಧಿಯ 2-3 ದಿನಗಳವರೆಗೆ ಕಾಯಬೇಕಾಗಿಲ್ಲ. ಚರ್ಮದ ಲಭ್ಯತೆಯೂ ಒಂದು ಸಮಸ್ಯೆಯಾಗಿದೆ. ನಮ್ಮದೇ ಚರ್ಮವನ್ನು ನಾವು ಮರಳಿ ಪಡೆಯುವ ಮೂಲಕ ನಾವು ಬೇಗನೆ ಚಿಕಿತ್ಸೆಯನ್ನು ಪ್ರಾರಂಭಿಸಬಹುದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ರೋಟರಿ ಜಿಲ್ಲಾ 3182ನ ಗವರ್ನರ್ ಪಿಎಚ್ಎಫ್ ಎಂಜಿ ರಾಮಚಂದ್ರ ಮೂರ್ತಿ ಮಾತನಾಡಿ, ರೋಟರಿಯ ಈ ವರ್ಷದ ಥೀಮ್ ‘ಜೀವನವನ್ನು ಬದಲಾಯಿಸಲು ಸೇವೆ ಮಾಡುವುದು’. ರೋಟರಿ ಮತ್ತು ಮಾಹೆಯ ಜಂಟಿ ಯೋಜನೆಯು ಜನರ ಜೀವನವನ್ನು ಬದಲಿಸಲು ಸಮುದಾಯಕ್ಕೆ ಸ್ಕಿನ್ ಬ್ಯಾಂಕ್ ಅನ್ನು ನೀಡುತ್ತಿದೆ. ರೋಟರಿ ಫೌಂಡೇಶನ್, ಮಾಹೆ, ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3182 ಮತ್ತು ಈ ಯೋಜನೆಯಲ್ಲಿ ಕೈ ಜೋಡಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಚ್ ಎಸ್ ಬಲ್ಲಾಳ್ ಮಾತನಾಡಿ, ನಮ್ಮಲ್ಲಿ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಅಡಿಯಲ್ಲಿ 18 ಹಾಸಿಗೆಗಳನ್ನು ಹೊಂದಿರುವ ಪೂರ್ಣ ಪ್ರಮಾಣದ ಬರ್ನ್ಸ್ ಘಟಕವನ್ನು ಹೊಂದಿದ್ದೇವೆ. ಇದಕ್ಕೆ ಪೂರಕವಾಗಿ, ಖಂಡಿತವಾಗಿಯೂ ಸ್ಕಿನ್ ಬ್ಯಾಂಕ್ ನ ಅವಶ್ಯಕತೆ ಇದೆ. ಏಕೆಂದರೆ ಬಹುತೇಕ ಎಲ್ಲಾ ಸುಟ್ಟಗಾಯ ರೋಗಿಗಳಿಗೆ, ನಂತರ ಚರ್ಮದ ಕಸಿ ಅಗತ್ಯವಿರುತ್ತದೆ. ಅಂಗ ಮತ್ತು ಅಂಗಾಂಶ ದಾನವನ್ನು ನಮ್ಮೆಲ್ಲರ ಕರ್ತವ್ಯವೆಂದು ಪರಿಗಣಿಸಬೇಕು. ನಿಮ್ಮ ಅಂಗಗಳು ಮತ್ತು ಅಂಗಾಂಶಗಳನ್ನು ದಾನ ಮಾಡುವುದು ಕೇವಲ ದಾನ ಮಾತ್ರವಲ್ಲ, ಇದು ಬೇರೆಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲಿದೆ ಎಂದರು.
ರೋಟರಿಯ ಎಂಜಿ ರಾಮಚಂದ್ರ ಮೂರ್ತಿ, ಸದಾನಂದ ಚಾತ್ರ, ರಾಜಾರಾಮ್ ಭಟ್ ಮತ್ತು ಗಣೇಶ್ ನಾಯಕ್ ಅವರು ಸ್ಕಿನ್ ಬ್ಯಾಂಕ್ ಉಪಕರಣಗಳನ್ನು ಮಾಹೆಗೆ ಹಸ್ತಾಂತರಿಸಿದರು. ಮಾಹೆಯ ಪರವಾಗಿ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್, ಉಪ ಕುಲಪತಿ ಎಂ ಡಿ ವೆಂಕಟೇಶ್ ಮತ್ತು ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ ಜಿ ಮುತ್ತಣ್ಣ ಸ್ವೀಕರಿಸಿದರು .
ಮುಂಬೈನ ನ್ಯಾಷನಲ್ ಬರ್ನ್ಸ್ ಸೆಂಟರ್ ಮತ್ತು ಸ್ಕಿನ್ ಬ್ಯಾಂಕ್ ನಿರ್ದೇಶಕ ಡಾ ಸುನಿಲ್ ಕೇಶ್ವಾನಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಪಿಎಚ್ಎಫ್ ಶೇಷಪ್ಪ ರೈ ಅವರು ಪ್ರಮುಖ ಕೊಡುಗೆದಾರರಾದ ಅಮೆರಿಕದ ಡಾ ವಸಂತ ಪ್ರಭು, ದಿನೇಶ್ ನಾಯಕ್, ರೋಟರಿ ಪ್ರತಿಷ್ಠಾನದ ಟ್ರಸ್ಟಿ ಗುಲಾಮ್ ಎ ವಾಹನ್ವತಿಯ ಸಂದೇಶಗಳನ್ನು ಓದಿದರು. ರೋಟರಿ ಕ್ಲಬ್ ಮಣಿಪಾಲ ಟೌನ್ ಅಧ್ಯಕ್ಷ ಗಣೇಶ್ ನಾಯಕ್ ಸ್ವಾಗತಿಸಿದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ ವಂದನಾರ್ಪಣೆ ಮಾಡಿದರು. ಡಾ ರವಿರಾಜ ಎನ್ ಎಸ್ ಕಾರ್ಯಕ್ರಮ ನಿರೂಪಿಸಿದರು.
ರೋಟರಿ -ಮಾಹೆ ಸ್ಕಿನ್ ಬ್ಯಾಂಕ್ ಸಹಾಯವಾಣಿ ಸಂಖ್ಯೆ 96866 76564