ನವದೆಹಲಿ: ದೇಶದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಭಾನುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡಿದರು.
ಭಾಷಣದ ಪ್ರಮುಖಾಂಶಗಳು:
-ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಘೋಷಣೆ. ನಾವು ಭಾರತವನ್ನು ಹಸಿರು ಜಲಜನಕದ ಉತ್ಪಾದನೆ ಮತ್ತು ರಫ್ತು ಮಾಡುವ ಕೇಂದ್ರವನ್ನಾಗಿಸಬೇಕು.
-ಜನ ಔಷಧಿ ಯೋಜನೆಯಿಂದಾಗಿ ಬಡವರು, ಅಗತ್ಯವಿರುವವರಿಗೆ ಕೈಗೆಟುಕುವ ದರದಲ್ಲಿ ಔಷಧಗಳು ಸಿಗುತ್ತಿವೆ. 75,000 ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬ್ಲಾಕ್ ಮಟ್ಟದಲ್ಲಿ ಆಸ್ಪತ್ರೆಗಳ ಸಂಪರ್ಕದ ಕುರಿತು ಕಾರ್ಯಾಚರಿಸುತ್ತಿದ್ದೇವೆ.
–ದೇಶದ ಎಲ್ಲ ಯೋಜನೆಗಳು ಶೇ 100ರಷ್ಟು ಜನರಿಗೆ ಸಂಪೂರ್ಣ ತಲುಪಬೇಕು.
-ಲಡಾಖ್ನಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಲಡಾಖ್ನ ‘ಇಂಡಸ್ ಸೆಂಟ್ರಲ್ ಯೂನಿವರ್ಸಿಟಿ’ ದೇಶದ ಉನ್ನತ ಶಿಕ್ಷಣ ಕೇಂದ್ರವಾಗಲಿದೆ.
–ಭಾರತ ಸರ್ಕಾರವು ಇ–ಕಾಮರ್ಸ್ ವೇದಿಕೆ ಶುರು ಮಾಡಲಿದ್ದು, ಹಳ್ಳಿಯ ಕರಕುಶಲಕರ್ಮಿಗಳಿಗೆ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ. ಹಳ್ಳಿಯ ಅಭಿವೃದ್ಧಿ ಪಥವು ಹೊಸ ಆಯಾಮವನ್ನು ಪಡೆಯುತ್ತಿದೆ. ಹಳ್ಳಿಗಳಲ್ಲಿ ಡಿಜಿಟಲ್ ಉದ್ಯಮಿಗಳೂ ರೂಪುಗೊಳ್ಳುತ್ತಿದ್ದಾರೆ.
–ಸ್ವಾಮಿತ್ವ ಯೋಜನೆಯು ಗ್ರಾಮೀಣ ಭಾರತದ ಬದುಕನ್ನು ಬದಲಿಸುತ್ತಿದೆ. ಗ್ರಾಮೀಣ ಜನರ ಭೂಮಿ ನಕ್ಷೆ ರೂಪಿಸಲು ಡ್ರೋನ್ಗಳು ಸಹಕಾರಿಯಾಗಿವೆ .
–’ಸಣ್ಣ ಇಳುವರಿದಾರರ ಮೇಲೆ ಸರ್ಕಾರ ಗಮನಹರಿಸಿದೆ. 10 ಕೋಟಿ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ₹1.5 ಲಕ್ಷ ಕೋಟಿ ಸಂದಾಯವಾಗಿದೆ’.
–ದೇಶದ 75ನೇ ಸ್ವಾತಂತ್ರೋತ್ಸವದ 75 ವಾರಗಳ ಆಚರಣೆಗೆ ಪಣತೊಟ್ಟಿದ್ದೇವೆ. 2021ರ ಮಾರ್ಚ್ 12ರಿಂದ 2023ರ ಆಗಸ್ಟ್ 15ರವರೆಗೂ ‘ಅಮೃತ ಮಹೋತ್ಸವ’ ನಡೆಯಲಿದೆ. ಭಾರತೀಯ ರೈಲ್ವೆ ಸಹ ದೇಶದ ಜೊತೆಗೆ ಮಹತ್ತರ ಪರಿವರ್ತನೆಯನ್ನು ಕಂಡಿದೆ.
–ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್ಇಪಿ) ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಿದೆ. ವಿದ್ಯಾರ್ಥಿಗಳು ತಮ್ಮ ಮನಸ್ಸಿಗೆ ಆಪ್ತವಾಗಿರುವ ಭಾಷೆಯಲ್ಲಿ ಪಾಠವನ್ನು ಕಲಿಯಲು ಅವಕಾಶವಾದರೆ, ಖಂಡಿತವಾಗಿಯು ಅದು ದೊಡ್ಡ ವಿಶ್ವಾಸವನ್ನು ಮೂಡಿಸಲಿದೆ ಎಂದು ಪ್ರಧಾನಿ ಹೇಳಿದರು.